ರಾಜ್ಯ ಹೆದ್ದಾರಿ ಅಗಲೀಕರಣಕೆ ಶಾಸಕ ಶ್ರೀನಿವಾಸ್ ಚಾಲನೆ
ತರೀಕೆರೆ: 15 ಕೋ.ರೂ. ವೆಚ್ಚದ ಕಾಮಗಾರಿ
ತರೀಕೆರೆ, ಆ.29: ಜಿಲ್ಲೆಯ ಬಾಗಲಕೋಟೆ - ಬಿಳಿಗಿರಿ ರಂಗನಬೆಟ್ಟ ರಸ್ತೆ ಯೋಜನೆಯಡಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಲಕ್ಕವಳ್ಳಿ ಡ್ಯಾಮ್‌ನಿಂದ ಸಂತವೇರಿಯ ವರೆಗಿನ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಲಿಂಗದಹಳ್ಳಿ ಹೋಬಳಿಯ ಉಡೇವಾ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಶಾಸಕ ಜಿ.ಎಚ್. ಶ್ರೀನಿವಾಸ್ ಚಾಲನೆ ನೀಡಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಒಟ್ಟು 350 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಳ್ಳಿ ಮತ್ತು ಪಟ್ಟಣಗಳ ನಡುವೆ ಸಂಪರ್ಕ ರಸ್ತೆ ಕಲ್ಪಿಸಲಾಗುವುದು. ಇದರಿಂದಾಗಿ ವ್ಯಾಪಾರ ವಹಿವಾಟು ಸಮಯದ ವ್ಯಯವಾಗದಂತೆ ಅಭಿವೃದ್ಧಿಯತ್ತ ತಾಲೂಕನ್ನು ಮುನ್ನಡೆಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಆಯ್ದ ಭಾಗಗಳ ರಸ್ತೆಗಳನ್ನು ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು, ಈ ಯೋಜನೆಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ಅನುಷ್ಠಾನಗೊಳಿಸುತ್ತಿದೆ ಎಂದರು.
ಲಕ್ಕವಳ್ಳಿ ಡ್ಯಾಮ್‌ನಿಂದ ಸಂತವೇರಿಗೆ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅವರಿಗೆ ಸಮಯ ಮತ್ತು ಉತ್ತಮ ರಸ್ತೆಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಿಕ್ಕಮಗಳೂರಿಗೆ ಹಾದು ಹೋಗುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಉಡೇವಾ ಪಟ್ಟಣದ ಕ್ರಾಸ್ ಬಳಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಅವುಗಳನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಸರಕಾರದ ಮೇಲೆ ಹಾಕಿದ ಒತ್ತಡಕ್ಕೆ ಮಣಿದು ಅಗಲೀಕರಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕರು ನುಡಿದರು. ಸರಕಾರದ ಮೇಲೆ ನಿರಂತರ ಒತ್ತಡ ತಂದು ತಾಲೂಕಿನ ಎಲ್ಲಾ ರಾಜ್ಯ ಹೆದ್ದಾರಿಗಳನ್ನು ಒಂದು ವರ್ಷದ ಒಳಗಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದ ಅವರು, ಬೀರೂರು - ದಾವಣಗೆರೆಗೆ ಹೆದ್ದಾರಿಯನ್ನು ಕೆಶಿಪ್ ಯೋಜನೆಯಡಿ ಅಭಿವೃದ್ಧಿ ಪಡಿಸಲು 50 ಕೋಟಿ ರೂ. ಬಿಡುಗಡೆಮಾಡಲಾಗಿದೆ. ಕಾಮಗಾರಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ಅಜ್ಜಂಪುರ-ಹೊಸದುರ್ಗ ರಸ್ತೆ ರಾಜ್ಯ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ
ಯನ್ನು ಪಡಿಸಲು ಕಾಮಗಾರಿ ಆರಂಭಿಸಲಾಗಿದೆ. ಅಜ್ಜಂಪುರದಿಂದ ತರೀಕೆರೆ ವರೆಗೆ ಹದಗೆಟ್ಟಿರುವ ರಸ್ತೆಯನ್ನು 8 ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಚಾಲ್ತಿಯಲ್ಲಿದೆ. ಹೋಳಲ್ಕೆರೆಗೆ ಹೋಗುವ ಶಿವನಿ-ದಾಸರಹಳ್ಳಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು. ನೀರಾವರಿ ಇಲಾಖೆ ನದಿ, ಕಾಲುವೆಗಳಿರುವ ಪ್ರದೇಶಗಳ ಜನರ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದ್ದು, ಇನ್ನೊಂದು ವರ್ಷದಲ್ಲಿ ಸಾರ್ವಜನಿಕರ ರಸ್ತೆ ಸಂಪರ್ಕ ಸಮಸ್ಯೆ ನೀಗಲಿದೆ ಎಂದು ಅವರು ತಿಳಿಸಿದರು. ಲಿಂಗದಹಳ್ಳಿ ಹೊರಭಾಗದಲ್ಲಿ ಕೆರೆ ನಿರ್ಮಾಣಕ್ಕೆ 1.3 ಕೋಟಿ ರೂ. ಮೀಸಲಿಟ್ಟಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿದೆ. ಇದರಿಂದಾಗಿ ಈ ಪ್ರಾಂತದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ ಶಾಸಕರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡೇವಾ ಗ್ರಾಪಂ ಅಧ್ಯಕ್ಷ ಟಿ. ಆಂಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ್, ಗ್ರಾಪಂ ಸದಸ್ಯರಾದ ಯು. ಗಿರೀಶ್, ಸಿ. ಪರಮೇಶ್, ಸಿ. ರಾಜಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ. ಈಶ್ವರಪ್ಪ, ಎಲ್. ಪಾಂಡುರಂಗಪ್ಪ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್, ಸಂಗೊಳ್ಳಿರಾಯಣ್ಣ ಯುವ ವೇದಿಕೆಯ ತಾಲೂಕು ಕಾರ್ಯದರ್ಶಿ ಪಿ. ದರ್ಶನ್, ಪಿಡಬ್ಲ್ಯೂಡಿ ಎ.ಇ ಗಳಾದ ಕಲ್ಲೇಶಪ್ಪ, ಶಿವಸ್ವಾಮಿ ಮುಂತಾದವರು ಇದ್ದರು.
ಉಡೇವಾ ಗ್ರಾ.ಪಂ. ವ್ಯಾಪ್ತಿಯ ಉಡೇಾ ಮತ್ತು ಗೊಣಗಿಲಕಟ್ಟೆ ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಲಾಗಿದ್ದು, ಪ್ರತಿ ಗ್ರಾಮಕ್ಕೆ 75 ಲಕ್ಷ ರೂ. ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಚಾಲನೆಯಲ್ಲಿ ವೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ಉ
ಡೇವಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4 ಚೆಕ್ ಡ್ಯಾಮ್‌ಗಳನ್ನು ಕೃಷಿ ಇಲಾಖೆಯ ವತಿಯಿಂದ ನಿರ್ಮಾಣ ಮಾಡಲಾಗಿದೆ. ಈ ಪ್ರಾಂತದಲ್ಲಿ 10 ಎಕರೆ ಪ್ರದೇಶದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಮಕ್ಕಳೇ ಹೆಚ್ಚಾಗಿ ಜೀವನ ನಿರ್ವಹಣೆ ಮಾಡುತ್ತಿರುವುದರಿಂದ ಎಸ್ಟೇಟ್‌ಗಳಿಗೆ ಕೂಲಿಗೆ ಹೋಗುವ ಕಾರ್ಮಿಕರ ಮಕ್ಕಳ ಹಿತಾಸಕ್ತಿಯನ್ನು ಕಾಪಾಡಲು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಇದ್ದರೂ ಸ್ಪಂದಿಸದ ಹಿಂದಿನ ಬಿಜೆಪಿ ಸರಕಾರ ರಾಜಕೀಯ ಗುದ್ದಾಟದಲ್ಲಿ ಸಿಲುಕಿ ಅಭಿವೃದ್ಧಿಯಲ್ಲಿ ವಿಫಲವಾತ್ತು. ಆ ಕಾರಣಗಳಿಂದಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ವಿಳಂಬವಾಗಿದೆ ಎಂದು ಶಾಸಕ ಶ್ರೀನಿವಾಸ್ ದೂರಿದ್ದಾರೆ.
ಹಿಂದಿನ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಬದುಕಿಗೆ ಬೇಕಾದಂತಹ ದೂರದೃಷ್ಠಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲರಾಗಿದ್ದರು. ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಳಜಿ ಇಲ್ಲದ ವಿರೋಧ ಪಕ್ಷಗಳಿಗೆ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗುತ್ತಿಲ್ಲ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಟೀಕಿಸಿದರು. ಬಡವರ, ಹಿಂದುಳಿದವರ, ದಲಿತರ, ಅಲ್ಪಸಂಖ್ಯಾತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಸಹಿಸದ ಸ್ಥಳೀಯ ಬಿಜೆಪಿ ನಾಯಕರು ರಾಜಕೀಯ ಉದ್ದೇಶಕ್ಕಾಗಿ ರಾಜ್ಯ ಸರಕಾರವನ್ನು ವಿನಾಕಾರಣ ದೊಷಿಸುತ್ತಿರುವುದು ಹಾಸ್ಯಾಸ್ಪದ ಎಂದರು.







