ಪೆಲೆಟ್ ಗನ್‌ಗಳ ಬಳಕೆಯನ್ನು ನಿಯಂತ್ರಿಸಲು ಸರಕಾರದ ಚಿಂತನೆ

ಹೊಸದಿಲ್ಲಿ,ಆ.29: ಕಾಶ್ಮೀರ ಕಣಿವೆಯಲ್ಲಿ ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಲು ಕೇಂದ್ರದ ಎನ್‌ಡಿಎ ಸರಕಾರವು ಒಲವು ಹೊಂದಿಲ್ಲ,ಬದಲಿಗೆ ಅದರ ಬಳಕೆಯನ್ನು ನಿಯಂತ್ರಿಸಲು ಅದು ಉದ್ದೇಶಿಸಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಪೆಲೆಟ್ ಗನ್‌ಗೆ ಪರ್ಯಾಯವನ್ನು ಕಂಡುಕೊಳ್ಳಲು ಜು.26ರಂದು ರಚಿಸಲಾಗಿದ್ದ ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿವಿಎಸ್‌ಎನ್ ಪ್ರಸಾದ ನೇತೃತ್ವದ ತಜ್ಞರ ಸಮಿತಿಯು ತನ್ನ ವರದಿಯನ್ನು ಗೃಹ ಕಾರ್ಯದರ್ಶಿಗಳಿಗೆ ಸಲ್ಲಿಸಿದೆ.
ಪೆಲೆಟ್ ಗನ್‌ಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರಲಾಗುವುದಿಲ್ಲ. ಹೆಚ್ಚೆಂದರೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಅದನ್ನು ಬಳಸಲಾಗುವುದು. ನಾವು ನಮ್ಮ ಭದ್ರತಾ ಪಡೆಗಳನ್ನು ದುರ್ಬಲಗೊಳಿಸಲಾಗುವುದಿಲ್ಲ ಎಂದು ಅಧಿಕಾರಿ ಸೋಮವಾರ ಇಲ್ಲಿ ತಿಳಿಸಿದರು.
ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ನಡೆದ ಹಿಂಸಾಚಾರಗಳಲ್ಲಿ ಭದ್ರತಾ ಪಡೆಗಳಿಂದ ಪೆಲೆಟ್ ಗನ್‌ಗಳ ಬಳಕೆಯಿಂದಾಗಿ 400ಕ್ಕೂ ಅಧಿಕ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಪೆಲೆಟ್ ಗನ್‌ಗಳ ಬಳಕೆಗಾಗಿ ಸರಕಾರವು ತೀವ್ರ ಟೀಕೆಗೆ ಗುರಿಯಾಗಿದ್ದು,ಅದನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳುವಂತೆ ಹಲವಾರು ರಾಜಕೀಯ ಪಕ್ಷಗಳು ಆಗ್ರಹಿಸಿವೆ.





