ವಿದ್ಯಾರ್ಥಿಗಳು ಚಿಂತಕರಾಗಬೇಕು: ಮಧೋಶ್ ಪೂವಯ್ಯ
ಇಕೋ ಕ್ಲಬ್‌ನ ಪ್ರಾರಂಭೋತ್ಸವ

ವಿರಾಜಪೇಟೆ, ಆ.29: ಜೀವನದ ನಿರ್ಣಾಯಕ ಹಂತವಾದ ವಿದ್ಯಾರ್ಥಿ ಜೀವನ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕೆಂದು ಕಸಾಪ ತಾಲೂಕು ಅಧ್ಯಕ್ಷ ಮುಳ್ಳೇಂಗಡ ಮಧೋಶ್ ಪೂವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2016-17ನೆ ಸಾಲಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇಕೋ ಕ್ಲಬ್‌ನ ಪ್ರಾರಂಭೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಚಿಂತಕರಾಗಿರಬೇಕು. ಶಿಸ್ತುಬದ್ಧವಾದ ಜೀವನ ಮನುಷ್ಯನನ್ನು ನೈಜ ಗುರಿಯೆಡೆಗೆ ಕೊಂಡೊಯ್ಯುತ್ತದೆ. ನಿರಂತರ ಪ್ರಯತ್ನದಿಂದ ಯಶಸ್ವಿ ಜೀವನವನ್ನು ರೂಪಿಸಿಕೊಳ್ಳಿ. ಉತ್ತಮ ಚಾರಿತ್ರ್ಯವಂತ ಯುವ ಸಮೂಹ ಇಂದಿನ ಬೇಡಿಕೆಯಾಗಿದೆ. ಅದನ್ನು ಪೂರೈಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು. ಹಿರಿಯ ವಕೀಲ ಬಿ.ಜಿ.ರಘುನಾಥ್ ನಾಯಕ್ ಅವರು ಮಾತನಾಡಿ, ವಿದ್ಯಾರ್ಥಿಗಳು ಸನ್ನಡತೆ ಮತ್ತು ಪ್ರಾಮಾಣಿಕತೆಯ ವಕ್ತಾರರಾಗಬೇಕು.ಸಮಾಜಕ್ಕೆ ಮಾದರಿಯಾಗುವಂತಹ ಮತ್ತು ಪೋಷಕರು ಹೆಮ್ಮೆ ಪಡುವಂತಹ ಮಕ್ಕಳಾಗಿ ಬಾಳಬೇಕು. ಶರೀರದಷ್ಟೇ ಮನಸ್ಸನ್ನು ಪರಿಶುದ್ಧಗೊಳಿಸಲು ಪ್ರಯತ್ನಿಸಬೇಕು ಎಂದರು.
ಪ್ರಾಂಶುಪಾಲ ಆರ್.ಮೋಹನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಸಮಿತಿ ಸದಸ್ಯೆ ಆಶಾ ಸುಬ್ಬಯ್ಯ, ಉಪ ಪ್ರಾಂಶುಪಾಲೆ ನೀತಾ ಕುಮಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕಿ ಎನ್.ಕೆ.ಜ್ಯೋತಿ ಸ್ವಾಗತಿಸಿದರು. ಎನ್ನೆಸ್ಸೆಸ್ಸ್ ಸಂಯೋಜನಾಧಿಕಾರಿ ಎಂ.ದಿನೇಶ್ ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪಿ.ಎ.ಸುಜಾತ ಕಾರ್ಯ ಚಟುವಟಿಕೆಗಳ ವರದಿಗಳನ್ನು ಮಂಡಿಸಿದರು. ಉಪನ್ಯಾಸಕಿ ಸಿ.ಯು.ರೋಜಿ ಪ್ರತಿಜ್ಞಾವಿಧಿ ಬೋಧಿಸಿದರು. 2015-16ನೆ ಸಾಲಿನ ದತ್ತಿನಿಧಿ ಬಹುಮಾನ ನಿರ್ವಹಣೆಯನ್ನು ಅಂತೋಣಿ ವಿವಿಯನ್ ಅಳ್ವಾರಿಸ್ ನೆರವೇರಿಸಿದರು.ಚಾರ್ಲ್ಸ್ ಡಿಸೋಜ ವಂದಿಸಿದರು.







