ವಿದೇಶಿಯರು ಸ್ಕರ್ಟ್ ಧರಿಸಬಾರದೆಂಬ ಒತ್ತಾಯವಿಲ್ಲ
ಸಚಿವ ಮಹೇಶ ಶರ್ಮಾ
ಹೊಸದಿಲ್ಲಿ,ಆ.29: ಭಾರತಕ್ಕೆ ಭೇಟಿ ನೀಡುವ ವಿದೇಶಿಯರು ಸ್ಕರ್ಟ್‌ಗಳನ್ನು ಧರಿಸುವುದರಿಂದ ಮತ್ತು ರಾತ್ರಿ ವೇಳೆ ಒಂಟಿಯಾಗಿ ಹೊರಗೆ ಹೋಗುವುದರಿಂದ ದೂರವಿರಬೇಕು ಎಂಬ ವಿವಾದಾಸ್ಪದ ಸಲಹೆ ನೀಡಿದ್ದ ಕೇಂದ್ರ ಸಹಾಯಕ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಅವರು, ತಾನು ಕೇವಲ ಧಾರ್ಮಿಕ ಸ್ಥಳಗಳನ್ನು ಮಾತ್ರ ಪ್ರಸ್ತಾಪಿಸಿದ್ದೆ ಮತ್ತು ಕಾಳಜಿಪೂರ್ವಕವಾಗಿ ಆ ಸಲಹೆಯನ್ನು ನೀಡಿದ್ದೆ ಎಂದು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘‘ನನಗೂ ಇಬ್ಬರು ಪುತ್ರಿಯರಿದ್ದಾರೆ. ಮಹಿಳೆಯರು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂದು ನಾನೆಂದೂ ಹೇಳುವುದಿಲ್ಲ. ಅತಿಥಿ ದೇವೋಭವ ಎನ್ನುವುದು ನಮ್ಮ ಸಂಸ್ಕೃತಿಯಾಗಿದೆ. ಇಂತಹುದೊಂದು ನಿಷೇಧ ಊಹಿಸಲೂ ಸಾಧ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಅಪರಾಧವೇನಲ್ಲ. ವಿವಿಧ ರಾಷ್ಟ್ರಗಳು ಆಗಿಂದಾಗ್ಗೆ ಸಲಹೆಗಳನ್ನು ಹೊರಡಿಸುತ್ತಲೇ ಇರುತ್ತವೆ. ಆದರೆ ಯಾರೇ ಆದರೂ ಉಡುಗೆಯ ವಿಧಾನ ವನ್ನು ಬದಲಿಸಬೇಕೆಂದು ನಾನೆಂದೂ ಹೇಳಿರಲಿಲ್ಲ’’ ಎಂದರು.
ನಿನ್ನೆ ಆಗ್ರಾದಂತಹ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗಳ ಸುರಕ್ಷತೆಗಾಗಿ ಸರಕಾರದ ಕ್ರಮಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಶರ್ಮಾ, ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗಳು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದರ ಯಾದಿಯನ್ನೇ ಒಪ್ಪಿಸಿದ್ದರು.
ಪ್ರವಾಸಿಗಳು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರಿಗೆ ‘ವೆಲ್‌ಕಂ ಕಿಟ್’ ನೀಡಲಾಗುತ್ತದೆ. ಸಣ್ಣ ಊರುಗಳಲ್ಲಿ ಸ್ಕರ್ಟ್ ಧರಿಸಬಾರದು ಮತ್ತು ರಾತ್ರಿ ವೇಳೆ ಒಂಟಿಯಾಗಿ ಹೊರಗೆ ತಿರುಗಾಡಬಾರದು ಇತ್ಯಾದಿ ಸಲಹೆಗಳಿರುವ ವಿವರಣಾ ಪತ್ರವೊಂದು ಈ ಕಿಟ್‌ನಲ್ಲಿರುತ್ತದೆ ಎಂದು ಅವರು ವಿವರಿಸಿದ್ದರು.
ಭಾರತವು ಸಾಂಸ್ಕೃತಿಕ ದೇಶವಾಗಿದೆ ಮತ್ತು ದೇವಸ್ಥಾನ ಗಳಿಗೆ ಭೇಟಿ ಸಂದರ್ಭದಲ್ಲಿ ಪ್ರತ್ಯೇಕ ವಸ್ತ್ರಸಂಹಿತೆಯನ್ನು ನಾವು ಹೊಂದಿದ್ದೇವೆ. ಇದನ್ನು ವಿದೇಶಿಯರು ಗಮನದಲ್ಲಿಟ್ಟು ಕೊಳ್ಳಬೇಕು ಎಂದರು.
ಈ ಸಮಜಾಯಿಷಿಯ ಬಳಿಕವೂ ಶರ್ಮಾ ವಿರುದ್ಧ ವ್ಯಾಪಕ ಟ್ವಿಟರ್ ಟೀಕೆಗಳು ಹರಿದು ಬಂದಿವೆ. ಇದರಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಹಿಂದೆ ಬಿದ್ದಿಲ್ಲ.
ವಿವಾದಗಳು ಶರ್ಮಾಗೆ ಹೊಸದೇನಲ್ಲ. ಕಳೆದ ವರ್ಷ ರಾತ್ರಿ ಹೊರಗೆ ಕಳೆಯಲು ಬಯಸುವ ಯುವತಿಯರನ್ನು ಈ ದೇಶವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಅವರು ವಿವಾದವೊಂದನ್ನು ಸೃಷ್ಟಿಸಿದ್ದರು.





