ರೆತರ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕೆ ಬದ್ಧ: ಸಿದ್ದರಾಮಯ್ಯ
ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶ

ಕೊಪ್ಪಳ, ಆ.29: ರೈತ ಸ್ವಾವಲಂಬಿಯಾಗದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ, ನೀರಾವರಿ ಮತ್ತು ರೈತರ ಅಭಿವೃದ್ಧಿಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆಯು ಸಂಯುಕ್ತವಾಗಿ ಆಯೋಜಿಸಿದ್ದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರನ್ನು ನಾವು ಮರೆತರೆ ದೇಶದಲ್ಲಿ ಆಹಾರ ಉತ್ಪಾದನೆ ಸಾಧ್ಯವಿಲ್ಲ. ರಾಜಸ್ಥಾನ ರಾಜ್ಯ ಬಿಟ್ಟರೆ ಅತೀ ಹೆಚ್ಚು ಒಣಭೂಮಿ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದಲ್ಲಿ 1.21ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ಈ ಪೈಕಿ ಶೇ.66ರಿಂದ 70ರಷ್ಟು ಒಣಭೂಮಿ ಬೇಸಾಯಕ್ಕೆ ಒಳಪಟ್ಟಿದೆ. ಮಳೆಯಾಶ್ರಿತ ರೈತರೇ ಹೆಚ್ಚಾಗಿ ಇರುವುದರಿಂದ, ದೊಡ್ಡ ಸಂಖ್ಯೆಯಲ್ಲಿರುವ ರೈತರ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರ ಅಧ್ಯಯನ ನಡೆಸಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೃಷಿಹೊಂಡ, ಪಾಲಿಹೌಸ್, ನೆರಳು ಪರದೆ ಘಟಕಕ್ಕೆ ವ್ಯಾಪಕ ಬೇಡಿಕೆ ಸಿಗುತ್ತಿದೆ. ಬೇರೆ ಇಲಾಖೆಗೆ ಅನುದಾನದ ಕೊರತೆಯಾದರೂ ಚಿಂತೆಯಿಲ್ಲ, ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ಹೆಚ್ಚುವರಿ ಯಾಗಿ 600 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೆ 300 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಕೃಷಿಕರು ಯಂತ್ರೋಪಕರಣ ಬಳಸಿ: ಕೃಷಿ ಯಂತ್ರಧಾರೆ ಸರಕಾರದ ಮಹತ್ವದ ಕಾರ್ಯಕ್ರಮ ವಾಗಿದೆ. ಲಕ್ಷಾಂತರ ರೈತರಿಗೆ ನಾವು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸುತ್ತಿದ್ದೇವೆ. ಎಲ್ಲೆಲ್ಲಿ ಕೃಷಿ ಯಂತ್ರವನ್ನು ಬಳಸಬೇಕಾಗಿದೆಯೋ, ಅಲ್ಲಲ್ಲಿ, ಯಂತ್ರೋಪಕರಣಗಳನ್ನು ರೈತರು ಬಳಸಬೇಕು. ಕಡಿಮೆ ಖರ್ಚು, ಅಧಿಕ ಇಳುವರಿ ಇದೇ ರೈತರ ಮೂಲ ಮಂತ್ರವಾಗಬೇಕು ಎಂದು ಕರೆ ನೀಡಿದರು.
ರೈತರಿಗೆ 10 ಸಾವಿರ ಕೊಟಿ ರೂ. ಸಾಲ:
ಕಳೆದ ವರ್ಷ ಭೀಕರ ಬರಗಾಲ ರಾಜ್ಯವನ್ನು ಆವರಿಸಿತ್ತು. ರಾಜ್ಯದ 136 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿತ್ತು. ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿಯೇ 18 ತಾಲೂಕುಗಳಿಗೆ ಭೇಟಿ ಕೊಟ್ಟು, ರೈತರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಕಂಡುಕೊಂಡಿದ್ದೇವೆ. ಕೇಂದ್ರ ಸರಕಾರವನ್ನು ಒತ್ತಾಯಿಸಿ ಈಗಾಗಲೇ ಬೆಳೆ ಪರಿಹಾರವನ್ನು ಕೊಡಿಸಲಾಗಿದೆ. 2015ರ ಸೆ.30ರವರೆಗಿನ ಎಲ್ಲ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಾಲ ವಸೂಲಾತಿಯನ್ನು 1 ವರ್ಷ ಮುಂದೂಡಲಾಗಿದೆ. ರೈತರ ಆತ್ಮಹತ್ಯೆಗೆ ಪರಿಹಾರ ಮೊತ್ತವನ್ನು 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ 2,000 ರೂ. ಮಾಸಾಶನವನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷ 23 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲು ಕ್ರಮಕೈಗೊಂಡಿದ್ದು, 10 ಸಾವಿರ ಕೋಟಿ ರೂ. ಸಾಲವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ: ಕೊಪ್ಪಳ ಏತನೀರಾವರಿ ಯೋಜನೆಗಾಗಿ 1,300 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಸರಕಾರ ಒದಗಿಸಿದೆ. ಮೂರು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 30 ಸಾವಿರ ಕೊಟಿ ರೂ. ಅನುದಾನವನ್ನು ಒದಗಿಸಿದ್ದು, ಒಟ್ಟಾರೆ ಐದು ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಅನುದಾನವನ್ನು ಸರಕಾರ ಒದಗಿಸಲಿದೆ. ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ಮೂರನೆ ಹಂತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ, ಹಾಗೂ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಕುರಿತಂತೆ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ನುಡಿದಂತೆ ನಡೆದಿದ್ದೇವೆ: ನಮ್ಮ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ ಈಗಾಗಲೇ 125ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ದೇವರಾಜ ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಬದಲಾವಣೆಯ ಪರ್ವವನ್ನು ನಮ್ಮ ಸರಕಾರ ಮುಂದುವರಿಸಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಬಸವರಾಜ ರಾಯರಡ್ಡಿ, ಎಚ್.ಕೆ. ಪಾಟೀಲ್ ಎಂ.ಬಿ.ಪಾಟೀಲ್, ಎಚ್.ಎಸ್.ಮಹದೇವ ಪ್ರಸಾದ್, ವಿನಯ್ ಕುಲಕರ್ಣಿ ಮಾತನಾಡಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕರಡಿ ಸಂಗಣ್ಣ, ಶಾಸಕರುರಾದ ಶಿವರಾಜ ತಂಗಡಗಿ, ಶಾಸಕರಾದ ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್.ಪಾಟೀಲ್, ಡಿ.ಆರ್.ಯಾವಗಲ್, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್, ಶ್ರೀನಿವಾಸ್ ಮಾನೆ, ಜಿಪಂ ಅಧ್ಯಕ್ಷ ಶೇಖರಪ್ಪ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಉಪಸ್ಥಿತರಿದ್ದರು.







