ಸೆಪ್ಟಂಬರ್ ಮೂರನೆ ವಾರ ವರದಿ: ಸಚಿವ ಜಯಚಂದ್ರ
ನೈಸ್ ಅಕ್ರಮ

ಬೆಂಗಳೂರು, ಆ.29: ‘ನೈಸ್’ ಅಕ್ರಮಗಳಿಗೆ ಸಂಬಂಧಿಸಿದ ಸದನ ಸಮಿತಿ ಈವರೆಗೂ 20 ಸಭೆಗಳನ್ನು ನಡೆಸಿದ್ದು, ಸೆಪ್ಟಂಬರ್ ಮೂರನೆ ವಾರದಲ್ಲಿ ಮಹತ್ವದ ವರದಿಯನ್ನು ಸಲ್ಲಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನೈಸ್’ ಅಕ್ರಮಗಳಿಗೆ ಸಂಬಂಧಿಸಿದ ಸದನ ಸಮಿತಿ ವರದಿ ನೀಡಲು ವಿಳಂಬ ಮಾಡುತ್ತಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನೈಸ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸದನ ಸಮಿತಿ ಏನು ಮಾಡಿಲ್ಲ ಎನ್ನುವವರಿಗೆ ಅತ್ಯಂತ ಹೆಚ್ಚು 20 ಸಭೆಗಳನ್ನು ನಡೆಸಿರುವುದು ಉತ್ತರ ಎಂದು ಭಾವಿಸಿದ್ದೇನೆ ಎಂದ ಸಚಿವರು, ಯಾರೊಬ್ಬರೂ ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಎಲ್ಲವನ್ನು ಸಮಗ್ರವಾಗಿ ಪರಿಶೀಲಿಸಿದ್ದು, ಶೀಘ್ರದಲ್ಲೇ ವರದಿ ನೀಡಲಿದ್ದೇವೆ ಎಂದರು.
‘ನೈಸ್’ ಅಕ್ರಮ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್‌ಮುಂದೆ ವಿಚಾರಣೆಗೆ ಬರಲಿದ್ದು, ಆ ಸಂಬಂಧ ರಾಜ್ಯದ ಪರ ವಕೀಲರು ಗಮನಹರಿಸಲಿದ್ದಾರೆ. ನೈಸ್ ಅಕ್ರಮಗಳಿಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ಸಂಗ್ರಹಿಸಿದ್ದು, ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅನುಮತಿ ಕಡ್ಡಾಯ: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿದಿದ್ದು, ರಾಜ್ಯದಲ್ಲಿ ಹೊಸ ಕೊಳವೆಬಾವಿ ಕೊರೆಸಲು ನಿರ್ಬಂಧ ಹೇರಲಾಗಿದೆ. ಹೊಸ ಕೊಳವೆಬಾವಿ ಕೊರೆಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಅನುಮತಿ ಕಡ್ಡಾಯ ಎಂದು ಸಚಿವರು ಹೇಳಿದರು.
ಪಟ್ಟಣ ಪ್ರದೇಶದಲ್ಲಿ ಒತ್ತುವರಿ ತೆರವು ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುತ್ತಿದೆ. ಆ.31ರಂದು ವಿಶೇಷ ನ್ಯಾಯಾಲಯ ಕಾರ್ಯಾರಂಭ ಮಾಡಲಿದ್ದು, ನ್ಯಾ.ನಾರಾಯಣ ಅವರನ್ನು ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ನಿಯೋಜಿಸಲಾಗಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.





