ಸಿಆರ್‌ಪಿಎಫ್ ಕಮಾಂಡಂಟ್, ರಾಯಭಾರಿ ಆಗಿ ಸಿಂಧು ನೇಮಕ
ಹೊಸದಿಲ್ಲಿ, ಆ.29: ದೇಶದ ಅತ್ಯಂತ ದೊಡ್ಡದಾದ ಅರೆ ಮಿಲಿಟರಿ ಪಡೆ ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ತನ್ನ ರಾಯಭಾರಿ ಆಗಿ ನೇಮಕ ಮಾಡಿದ್ದಲ್ಲದೆ ಕಮಾಂಡಂಟ್ ಗೌರವ ಶ್ರೇಣಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಸಿಆರ್‌ಪಿಎಫ್ ಅಧಿಕೃತ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದು, ಅಗತ್ಯವಿರುವ ಅನುಮತಿಯನ್ನು ಪಡೆದ ಬಳಿಕ ಕಾರ್ಯಕ್ರಮವೊಂದರಲ್ಲಿ ಸಿಂಧು ಅವರಿಗೆ ರ್ಯಾಂಕ್ ಬ್ಯಾಡ್ಜ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಆರ್‌ಪಿಎಫ್‌ನ ಕಮಾಂಡಂಟ್ ಶ್ರೇಣಿಯು ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ(ಎಸ್‌ಪಿ) ಸಮಾನವಾಗಿದೆ. ಫೀಲ್ಡ್ ಆಪರೇಶನ್ ವೇಳೆ ಕಮಾಂಡ್ಸ್ ಆಫೀಸರ್ 1000ಕ್ಕೂ ಅಧಿಕ ಬಟಾಲಿಯನ್‌ನ್ನು ಮುನ್ನಡೆಸುತ್ತಾರೆ.
3 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳನ್ನು ಹೊಂದಿರುವ ಬಲಿಷ್ಠ ಪಡೆ ಸಿಆರ್‌ಪಿಎಫ್ ನಕ್ಸಲ್ ವಿರೋಧಿ ಕಾರ್ಯಾಚರಣೆ ಹಾಗೂ ದೇಶದ ವಿವಿಧ ಆಂತರಿಕ ಭದ್ರತೆಯನ್ನು ಒದಗಿಸುವ ಜವಾಬ್ದಾರಿ ಹೊಂದಿದೆ. ಸಿಂಧು ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿರುವ ಸಿಆರ್‌ಪಿಎಫ್ ತನ್ನ ಸಿಬ್ಬಂದಿಗೆ ಉತ್ತೇಜನ ನೀಡುವ ಜೊತೆಗೆ ಮಹಿಳಾ ಶಕ್ತಿಯ ಬಗ್ಗೆ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ.







