ರಿಯೋದಿಂದ ವಾಪಸಾದ ಭಾರತದ ಹಾಕಿ ಆಟಗಾರ್ತಿಯರಿಗೆ ರೈಲ್ವೆ ಅವಮಾನ

ಭುವನೇಶ್ವರ್, ಆ.29: ರಾಜ್ಯದ ನಾಲ್ವರು ಆಟಗಾರ್ತಿಯರು ಇತ್ತೀಚೆಗೆ ಕೊನೆಗೊಂಡ ರಿಯೋ ಒಲಿಂಪಿಕ್ಸ್‌ಗೆ ಭಾರತೀಯ ಹಾಕಿ ತಂಡದಲ್ಲಿ ಆಯ್ಕೆಯಾದಾಗ ಒಡಿಶಾದ ಜನತೆ ಸಂಭ್ರಮಪಟ್ಟಿದ್ದರು. ಆದರೆ, ರಾಂಚಿಯಿಂದ ರೂರ್ಕೆಲಾಕ್ಕೆ ವಾಪಸಾಗುತ್ತಿದ್ದ ರೈಲ್ವೆಯಲ್ಲಿ ರಾಜ್ಯದ ನಾಲ್ವರು ಆಟಗಾರ್ತಿಯರಿಗೆ ಕುಳಿತುಕೊಳ್ಳಲು ಆಸನ ನೀಡದೇ ಬೋಗಿಯ ನೆಲದಲ್ಲಿ ಕುಳಿತುಕೊಳ್ಳುವಂತೆ ಮಾಡಿದ ರೈಲ್ವೆ ಅಧಿಕಾರಿಯ ಧೋರಣೆಗೆ ಒಡಿಶಾ ಸೇರಿದಂತೆ ದೇಶದ ಜನತೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಾಕಿ ತಾರೆಯರಾದ ದೀಪಾ ಗ್ರೇಸ್ ಎಕ್ಕಾ, ನಮಿತಾ ಟೊಪ್ಪೊ, ಲಲಿಮಾ ಮಿಂಝ್ ಹಾಗೂ ಸುನೀಲಾ ಲಾಕ್ರಾ ರಾಂಚಿಯಿಂದ ರೂರ್ಕೆಲಾಕ್ಕೆ ತೆರಳುತ್ತಿದ್ದ ಧನಬಾದ್-ಅಲ್ಲೆಪ್ಪಿ ಎಕ್ಸ್‌ಪ್ರೆಸ್ ರೈಲ್ವೆಯನ್ನು ಶನಿವಾರ ಏರಿದ್ದರು. ಆದರೆ, ದೃಢೀಕೃತ ಟಿಕೆಟ್ ಹೊಂದಿಲ್ಲವೆಂಬ ಕಾರಣಕ್ಕೆ ಈ ನಾಲ್ವರು ಆಟಗಾರ್ತಿಯರು ಕೆಲವು ಗಂಟೆಗಳ ಕಾಲ ಬೋಗಿಯ ನೆಲದಲ್ಲಿ ಕುಳಿತು ಪ್ರಯಾಣಿಸುವಂತೆ ಮಾಡಲಾಗಿದೆ.
ರೈಲ್ವೆ ಟಿಕೆಟ್ ತಪಾಸಣೆಗಾರನಿಗೆ(ಟಿಟಿಇ) ತಮ್ಮ ಗುರುತು ಪತ್ರ ತೋರಿಸಿದರೂ ಸುಂದರ್‌ಗಢದ ಈ ನಾಲ್ವರು ಆಟಗಾರ್ತಿಯರಿಗೆ ಆಸನ ಕಲ್ಪಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
‘‘ನಮಗೆ ಸೀಟು ನೀಡುವಂತೆ ಟಿಟಿಇಗೆ ವಿನಂತಿಸಿದೆವು. ಆದರೆ, ಅವರು ನಮ್ಮ ಕೋರಿಕೆಯನ್ನು ನಿರಾಕರಿಸಿದರು. ಒಂದು ಗಂಟೆ ಪ್ರಯಾಣಿಸಿದ ಬಳಿಕ ನಮಗೆ ಸೀಟು ಲಭಿಸಿತು’’ ಎಂದು ಸುನೀತಾ ಹೇಳಿದ್ದಾರೆ.
‘‘ಭಾರತೀಯ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಲು ವಿಫಲವಾದರೂ 36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಇತಿಹಾಸ ಬರೆದಿದೆ. ಅವರಿಗೆ ಉತ್ತಮ ಆತಿಥ್ಯ ನೀಡಬೇಕಾದ ಅಗತ್ಯವಿದೆ. ಅದಕ್ಕವರು ಅರ್ಹರಿದ್ದಾರೆ’’ ಎಂದು ಕ್ರೀಡಾಪ್ರೇಮಿ ರಾಮಚಂದ್ರ ಬೆಹ್ರಾ ಹೇಳಿದ್ದಾರೆ.
ವರದಿ ನಿರಾಕರಿಸಿದ ರೈಲ್ವೆ:
ಹೊಸದಿಲ್ಲಿ, ಆ.29: ರಾಂಚಿಯಿಂದ ರೂರ್ಕೆಲ್‌ಗೆ ಪ್ರಯಾಣಿಸುತ್ತಿದ್ದಾಗ ಭಾರತದ ಹಾಕಿ ಆಟಗಾರ್ತಿಯರು ಬೋಗಿಯ ನೆಲದಲ್ಲಿ ಕುಳಿತು ಪ್ರಯಾಣಿಸಿದ್ದರು ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ. ಟಿಟಿಇ ಆಟಗಾರ್ತಿಯರನ್ನು ಬೋಗಿಯ ನೆಲದಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ ಎಂಬ ವರದಿಯೂ ಸುಳ್ಳು. ಆಟಗಾರ್ತಿಯರು ದೃಢೀಕೃತ ಟಿಕೆಟ್ ಹೊಂದಿಲ್ಲದ ಕಾರಣ ಟಿಟಿಸಿ ಕೇವಲ 20 ನಿಮಿಷಗಳಲ್ಲಿ ಆಸನದ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ರೈಲ್ವೇಸ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ.







