2ನೆ ಟ್ವೆಂಟಿ-20 ರದ್ದು: ಧೋನಿ-ಬ್ರಾಥ್‌ವೈಟ್ ಭಿನ್ನ ರಾಗ

ಫ್ಲೋರಿಡಾ, ಆ.29: ಮಳೆಯಿಂದಾಗಿ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ಮಳೆಗಾಹುತಿಯಾದ ಬಳಿಕ ಭಾರತದ ನಾಯಕ ಎಂಎಸ್ ಧೋನಿ ಹಾಗೂ ವೆಸ್ಟ್‌ಇಂಡೀಸ್ ನಾಯಕ ಕಾರ್ಲಸ್ ಬ್ರಾಥ್‌ವೈಟ್ ಇಲ್ಲಿನ ಸೆಂಟ್ರಲ್ ರೀಜನಲ್ ಪಾರ್ಕ್ ಮೈದಾನದ ಗುಣಮಟ್ಟದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವೆಸ್ಟ್‌ಇಂಡೀಸ್‌ನ್ನು 143 ರನ್‌ಗೆ ಆಲೌಟ್ ಮಾಡಿದ ಭಾರತ ತಂಡ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದ್ದಾಗ 15 ನಿಮಿಷಗಳ ಕಾಲ ಸುರಿದ ಸಿಡಿಲು-ಗುಡುಗು ಸಹಿತ ಮಳೆಗೆ ಮೈದಾನದಲ್ಲಿ ನೀರು ತುಂಬಿತ್ತು. ಪರಿಣಾಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದುಪಡಿಸಿದರು.
‘‘ಮೈದಾನದ ಎರಡು-ಮೂರು ಕಡೆ ಸಮಸ್ಯೆಯಿತ್ತು. ನನ್ನ ಪ್ರಕಾರ ಇದು ಅಸುರಕ್ಷಿತವಾಗಿದೆ. ನಮಗೆ ಕ್ರಿಕೆಟ್ ಆಡುವುದಷ್ಟೇ ಮುಖ್ಯವಾಗಿ, ಪ್ರತಿಯೊಬ್ಬ ಆಟಗಾರನ ಸುರಕ್ಷತೆಯ ಬಗ್ಗೆಯೂ ಗಮನ ನೀಡಬೇಕಾಗುತ್ತದೆ’’ ಎಂದು ಬ್ರಾಥ್‌ವೈಟ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ವೃತ್ತಿಜೀವನದಲ್ಲಿ ಅತ್ಯಂತ ಕಳಪೆ ಮೈದಾನದಲ್ಲಿ ಆಡಿರುವೆ ಎಂದು ಹೇಳಿದ ಭಾರತದ ನಾಯಕ ಎಂಎಸ್ ಧೋನಿ, 2011ರ ಇಂಗ್ಲೆಂಡ್ ಪ್ರವಾಸದ ಉದಾಹರಣೆ ನೀಡಿದರು.
‘‘ಸೆಂಟ್ರಲ್ ರೀಜನಲ್ ಪಾರ್ಕ್ ಮೈದಾನದಲ್ಲಿ ಸಾಕಷ್ಟು ಸಲಕರಣೆಗಳಿಲ್ಲ ಎಂದು ಅಂಪೈರ್‌ಗಳು ನಮಗೆ ತಿಳಿಸಿದರು. ಮಳೆಯಿಂದಾಗಿ ಪಿಚ್ ಹಾಳಾದ ಕಾರಣ ಪಂದ್ಯ ಮುಂದುವರಿಸಲು ಸಾಧ್ಯವಾಗಿಲ್ಲ. ನಾನು ಸುಮಾರು 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದು, ನನ್ನ ವೃತ್ತಿಜೀವನದಲ್ಲಿ ಇಷ್ಟೊಂದು ಕೆಟ್ಟ ವಾತಾವರಣ ನೋಡಿಲ್ಲ. 2011ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ನಾವು ಮಳೆಯಲ್ಲೇ ಕ್ರಿಕೆಟ್ ಆಡಬೇಕಾದ ಪರಿಸ್ಥಿತಿ ಬಂದಿತ್ತು. ಅಂಪೈರ್‌ಗಳೇ ಕ್ರಿಕೆಟ್ ಆಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ’’ಎಂದು ಧೋನಿ ಹೇಳಿದ್ದಾರೆ.







