ಕಾನೂನು ಅರಿವು ಮೂಡಿಸಲು ನ್ಯಾಯಮೂರ್ತಿ ಮಹಾಸ್ವಾಮಿ ಕರೆ
ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ

ಮಡಿಕೇರಿ, ಆ.30: ಸಾರ್ವಜನಿಕರಿಗೆ ಕಾನೂನಿನ ಅರಿವನ್ನು ಮೂಡಿಸುವಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಹಕಾರಿಯಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ ಅವರು ತಿಳಿಸಿದ್ದಾರೆ. ನಗರದ ರೋಟರಿ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಇವುಗಳ ಸಂಯುಕ್ತಾಶ್ರಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಒಂದು ದಿನದ ತರಬೇತಿ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಕಾನೂನಿನ ಬಗ್ಗೆ ಅರಿಯದೆ ಅನೇಕ ತಪ್ಪುಗಳು ಆಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳು ಲೋಕ ಅದಾಲತ್, ಉಚಿತ ಕಾನೂನು ನೆರವು, ಮಧ್ಯಸ್ಥಿಕೆ, ರಾಜಿ ಸಂಧಾನಗಳನ್ನು ನಡೆಸುತ್ತಿದ್ದು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸಹಕಾರಿಯಾಗಬೇಕು ಎಂದರು. ಪೊಲೀಸ್ ಉಪ ನಿರೀಕ್ಷಕರಾದ ಛಬ್ಬಿ ಅವರು ಮಾತನಾಡಿ, ಕಾನೂನಿನ ಕಾಯ್ದೆಗಳನ್ನು ಅಲ್ಪಮಟ್ಟದಲ್ಲಿಯಾದರೂ ಪ್ರತಿಯೊಬ್ಬರೂ ತಿಳಿಯುವುದು ಒಳಿತು. ಕೆಲವು ಸಂದರ್ಭಗಳಲ್ಲಿ ಕಾನೂನಿನ ಅರಿವಿಲ್ಲದೆ, ಸಣ್ಣ ಪುಟ್ಟ ಗಲಾಟೆಗಳನ್ನು ದೊಡ್ಡದು ಮಾಡಿಕೊಂಡು ಪೊಲೀಸ್ ಇಲಾಖೆಗೆ ಬರುವುದು ಸರಿಯಲ್ಲ. ಆದಷ್ಟು ರಾಜಿ ಸಂಧಾನ ಅಥವಾ ಕಾನೂನು ಸುವ್ಯವಸ್ಥೆಯನ್ನು ಅರಿತುಕೊಳ್ಳುವುದು ಉತ್ತಮ ಎಂದರು. ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ಅವರು ಮಾತನಾಡಿ, ನ್ಯಾಯಾಲಯದಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಪ್ರಕರಣಗಳು ದೇಶದಲ್ಲಿ ಕಾನೂನಿನ ಅರಿವಿಲ್ಲದೆ ಆಗುತ್ತಿದೆ. ಆದ್ದರಿಂದ ಕಾನೂನಿನ ಸಾಮಾನ್ಯ ಅರಿವು ಜನ ಸಾಮಾನ್ಯರಲ್ಲಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ಯಾರಾಲೀಗಲ್‌ವಾಲಂಟಿಯರ್ಸ್‌ಗಳು ಸಹಕಾರಿಯಾಗಬೇಕು ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅಗಸ್ಟೀನ್ ಜಯರಾಜ್ ಅವರು ಮಾತನಾಡಿ, ಕಾನೂನಿನ ಅರಿವು ಶಾಲಾ ಕಾಲೇಜು ಮಟ್ಟ ಸೇರಿದಂತೆ ಸಂಘ ಸಂಸ್ಥೆಗಳಿಗೂ ಅಗತ್ಯವಾಗಿ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರವು ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಮೋಹನ್‌ಪ್ರಭು, ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ಅಪ್ಪಾಜಿ, ಪರಿಸರಾಧಿಕಾರಿ ಜಿ.ಆರ್.ಗಣೇಶನ್, ವಕೀಲರಾದ ಕೆ.ಎಂ.ಮೀನಾ ಕುಮಾರಿ, ಪಿ.ಯ.ಪ್ರೀತಂ, ಎಂ.ಎ.ನಿರಂಜನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





