ಅಕ್ರಮ ಕಟ್ಟಡ ತೆರವಿಗೆ ಒತ್ತಾಯ
ನಾಗರಿಕ ವೇದಿಕೆಯಿಂದ ನಗರಸಭೆಗೆ ಮನವಿ

ಸಾಗರ, ಆ.30: ನಗರವ್ಯಾಪ್ತಿಯ ಎಸ್.ಎನ್.ನಗರ ಬಡಾವಣೆಯ ರಸ್ತೆ ರಿಪೇರಿ ಮಾಡಬೇಕು ಹಾಗೂ ಅಕ್ರಮ ನಿವೇಶನಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ನಾಗರಿಕ ವೇದಿಕೆ ವತಿಯಿಂದ ನಗರಸಭೆಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಶಿವಪ್ಪನಾಯಕ ನಗರ ಬಡಾವಣೆಯ ಬಹುತೇಕ ರಸ್ತೆಗಳು ಪೂರ್ಣ ಹಾಳಾಗಿವೆ. ಕಳೆದ 2 ತಿಂಗಳಿನಿಂದ ರಸ್ತೆ ಸಂಚಾರ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಂದಿರಾಗಾಂಧಿ ಕಾಲೇಜಿನ ರಸ್ತೆಯಂತೂ ಪೂರ್ಣ ಹಾಳಾಗಿದೆ. ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಕಷ್ಟಪಟ್ಟು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಪರಿವರ್ತನೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎಸ್.ಎನ್.ನಗರದ ಅನೇಕ ಬಡಾವಣೆಗಳಲ್ಲಿರುವ ಕನ್ಸರ್‌ವೆನ್ಸಿ ರಸ್ತೆಯಲ್ಲಿ ಗಿಡಮರ, ಪೊದೆಗಳು ದಟ್ಟವಾಗಿ ಬೆಳೆದು ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಇದರಿಂದೆ ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ನಗರಸಭೆ ವತಿಯಿಂದ ಗಿಡಮರಗಳನ್ನು ಕಟಾವು ಮಾಡಿ, ಸ್ವಚ್ಛತೆ ಕಾಪಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಬಡಾವಣೆಯ ಒಂದನೆ ಮತ್ತು ಇತರ ಕ್ರಾಸ್‌ಗಳಲ್ಲಿ ನಗರಸಭೆಗೆ ಸಂಬಂಧಪಟ್ಟ ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಪ್ರಯತ್ನ ನಡೆದಿದೆ. ಜಾಗವನ್ನು ಕಬಳಿಸುವ ಭೂ ಮಾಫಿಯದವರು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಅತಿಕ್ರಮವಾಗಿ ನಿರ್ಮಿಸಿರುವ ಬೇಲಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಶಿವಪ್ಪನಾಯಕ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿತರಿಸುತ್ತಿರುವ ಹಾಲು ಮತ್ತು ಇತರ ಆಹಾರ ಪದಾರ್ಥಗಳನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ. ಆರೋಗ್ಯ ಇಲಾಖೆಯು ಹಾಲಿನ ಗುಣಮಟ್ಟ ಪರೀಕ್ಷೆ ಮಾಡದೇ ಕೊಡುತ್ತಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ನೀಡುವ ಹಾಲನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ವೇದಿಕೆ ಅಧ್ಯಕ್ಷ ಎಂ.ರಾಜಶೇಖರ್, ಸುಬ್ರಹ್ಮಣ್ಯ, ಮಂಜಪ್ಪ, ಶಾಜಿಯಾ, ಶಶಿಕಾಂತ್, ಅಬ್ದುಲ್ ವಹೀದ್, ಸತ್ಯನಾರಾಯಣ ಮತ್ತಿತರರಿದ್ದರು.







