ಶಾಂತಿಯುತ ಹಬ್ಬ ಆಚರಣೆಗೆ ಡಿಸಿ ಸೂಚನೆ

ಶಿವಮೊಗ್ಗ, ಆ. 30: ಗೌರಿ-ಗಣೇಶೋತ್ಸವ ಹಾಗೂ ಸೆಪ್ಟಂಬರ್ 12 ರಂದು ನಡೆಯಲಿರುವ ಬಕ್ರೀದ್ ಆಚರಣೆಯನ್ನು ಶಾಂತಿ-ಸುವ್ಯವಸ್ಥೆಯಿಂದ ನಡೆಸಲು ಸಮುದಾಯದ ಎಲ್ಲ ಮುಖಂಡರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ತಿಳಿಸಿದ್ದಾರೆ. ಗಣೇಶೋತ್ಸವ ಹಾಗೂ ಬಕ್ರೀದ್ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಶಾಂತಿ ಸಭೆಸಮಿತಿ ಸಭೆಯಲ್ಲಿ ಮತನಾಡುತ್ತಿದ್ದರು.
ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಗಮನಹರಿಸಬೇಕು. ಹಬ್ಬ ಆಚರಿಸಲಾಗುವ ಸ್ಥಳಗಳಲ್ಲಿ ಸಂಭ್ರಮ ಇರಬೇಕೆ ಹೊರತು ಅಶಾಂತಿ ಇರಬಾರದು. ಎಲ್ಲರೂ ಶಾಂತಿಯುತ ವಾತಾವರಣ ಉಳಿಸಿಕೊಂಡಲ್ಲಿ ಪೊಲೀಸರ ಆವಶ್ಯಕತೆ ಇರಲಾರದು ಎಂದು ಅವರು ಅಭಿಪ್ರಾಯಿಸಿದರು.
ಬಳಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಶಿವಮೊಗ್ಗ ನಗರದಲ್ಲಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ಸಂದಭರ್ದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘಗಳಿಗೆ ಹಲವು ಸಲಹೆ-ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಡಳಿತದ ಸೂಚನೆಯಂತೆ ಗಣಪತಿ ಮೂರ್ತಿಗಳ ವಿಸರ್ಜನೆಯನ್ನು ಬೆಳಗ್ಗೆ 7ರಿಂದ ಕತ್ತಲಾಗುವುದರೊಳಗೆ ಪೂರ್ಣಗೊಳಿಸಬೇಕು. ಮೆರವಣಿಗೆಯಲ್ಲಿ ಡಿ.ಜೆ. ಮ್ಯೂಸಿಕ್ ಬಳಕೆ ಮಾಡುವುದರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. ಭದ್ರತೆ: ಜಿಲ್ಲೆಯಲ್ಲಿ ಸುಮಾರು 2,000 ಕ್ಕೂ ಅಧಿಕ ಗಣಪತಿಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 2,500ಕ್ಕೂ ಅಧಿಕ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆದುಕೊಂಡು ಬರುತ್ತಿದೆ ಎಂದರು. ಈ ಹಿಂದಿನಂತೆ ಪ್ರಮುಖ ಗಣಪತಿಗಳ ಮೆರವಣಿಗೆಯು ನಿರ್ದಿಷ್ಟ ಮಾರ್ಗಗಳಲ್ಲಿಯೇ ಸಂಚರಿಸಲಿದೆ. ಬಂದೋಬಸ್ತ್ ಕಾರ್ಯಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ-ಸಿಬ್ಬಂದಿ ಸಹಕಾರ ಪಡೆಯಲಾಗುವುದು. ಗಣಪತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳು ಪೊಲೀಸ್ ಇಲಾಖೆಯ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಈ ಮೂಲಕ ಶಾಂತಿ-
ಸುವ್ಯವಸ್ಥೆ ಕಾಯ್ದುಕೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಮಹಾನಗರ ಪಾಲಿಕೆ ಮೇಯರ್ ಎಸ್.ಕೆ. ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ರವಿ ಡಿ. ಚೆನ್ನಣ್ಣನವರ್ ಬಗ್ಗೆ ಮೆಚ್ಚುಗೆ:
ಪ್ರಸ್ತುತ ಮೈಸೂರಿಗೆ ವರ್ಗಾವಣೆಯಾಗಿರುವ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಈ ಹಿಂದಿನ ವರ್ಷ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಗಣೇಶೋತ್ಸವ ಹಬ್ಬ ನಡೆಸಿರುವುದನ್ನು ಸಭೆಯಲ್ಲಿ ಭಾಗವಹಿಸಿದ್ದ ಕೆಲ ನಾಗರಿಕರು ಮೆಲುಕು ಹಾಕಿದರು. ರವಿ ಡಿ. ಚೆನ್ನಣ್ಣನವರ್ ಎಲ್ಲ ನಾಗರಿಕರ ವಿಶ್ವಾಸ ಪಡೆದು, ಅತ್ಯಂತ ಯಶಸ್ವಿಯಾಗಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಸಿದ್ದರು. ತಾವು ಕೂಡ ಸಾರ್ವಜನಿಕರ ವಿಶ್ವಾಸ, ಸಹಕಾರದೊಂದಿಗೆ ಕಾರ್ಯನಿರ್ವಹಣೆ ಮಾಡಿ ಎಂದು ಮುಖಂಡರೊಬ್ಬರು ನೂತನ ಎಸ್ಪಿ ಅಭಿನವ್ ಖರೆಗೆ ಸಲಹೆ ನೀಡಿದರು.







