ಲೆಫ್ಟಿನೆಂಟ್ ಗವರ್ನರ್‌ರಿಂದ ದಿಲ್ಲಿ ಸರಕಾರಿ ನೌಕರರ ವರ್ಗಾವಣೆ
ಮೋದಿ ವಿರುದ್ಧ ಕೇಜ್ರಿವಾಲ್ ದಾಳಿ
ಹೊಸದಿಲ್ಲಿ, ಆ.30: ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಆಪ್ ಸರಕಾರದ ಮುಂಚೂಣಿಯ ಯೋಜನೆಗಳಲ್ಲಿ ತೊಡಗಿಕೊಂಡಿರುವ ಹಲವಾರು ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಆದೇಶಿಸಿದ್ದಾರೆ. ಇದರಿಂದ ಕೆರಳಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಟು ಟೀಕಾಪ್ರಹಾರ ನಡೆಸಿದ್ದು, ಅವರು ದಿಲ್ಲಿಯ ‘ವಿನಾಶ’ಕ್ಕೆ ಪಣ ತೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅವರು ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದಾರೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಇದು ಜಂಗ್ ಅವರು ಮಾಡಿರುವ ಮೊದಲ ವರ್ಗಾವಣೆಯಾಗಿದೆ. ಆರೋಗ್ಯ ಕಾರ್ಯದರ್ಶಿ ತರುಣ್ ಸೀಮ್ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಚಂದ್ರಾಕರ ಭಾರ್ತಿ ಅವರನ್ನು ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಐಎಎಸ್‌ಯೇತರ ಕೇಡರ್‌ನ ಸರ್ವಜ್ಞ ಶ್ರೀವಾಸ್ತವ ಅವರ ಸ್ಥಾನದಲ್ಲಿ ಅಶ್ವನಿಕುಮಾರ್ ಅವರನ್ನು ನೇಮಕಗೊಳಿಸಲಾಗಿದೆ.
ಉಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಕೇಜ್ರಿವಾಲ್ ಸರಕಾರದ ಮುಂಚೂಣಿಯ ಯೋಜನೆಗಳಾದ ಮೊಹಲ್ಲಾ ಆಸ್ಪತ್ರೆಗಳ ಸ್ಥಾಪನೆ ಮತ್ತು ನೂತನ ಶಾಲಾ ಕಟ್ಟಡಗಳ ನಿರ್ಮಾಣವನ್ನು ನಿರ್ವಹಿಸುತ್ತಿರುವ ಸೀಮ್ ಮತ್ತು ಶ್ರೀವಾಸ್ತವ್ ಅವರನ್ನು ವರ್ಗಾಯಿಸದಂತೆ ಜಂಗ್ ಅವರನ್ನು ಕೋರಿಕೊಂಡಿದ್ದರು.
‘‘ಇಂದು ಲೆಫ್ಟಿನೆಂಟ್ ಗವರ್ನರ್ ಅವರು ನೇರವಾಗಿ ಹಲವಾರು ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿದ್ದಾರೆ. ಮುಖ್ಯಮಂತ್ರಿ ಅಥವಾ ಇತರ ಯಾವುದೇ ಸಚಿವರಿಗೂ ಕಡತಗಳನ್ನು ತೋರಿಸಲಾಗಿಲ್ಲ. ಇಬ್ಬರು ಹಿರಿಯ ಅಧಿಕಾರಿ ಗಳನ್ನು ವರ್ಗಾಯಿಸದಂತೆ ಸಿಸೋದಿಯಾ ಕೋರಿ ಕೊಂಡಿದ್ದರು, ಆದರೆ ಲೆಫ್ಟಿನೆಂಟ್ ಗವರ್ನರ್ ಅವರು ಅದಕ್ಕೆ ಕಿವಿಗೊಟ್ಟಿಲ್ಲ’’ ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ಜಂಗ್ ಅವರ ಆದೇಶಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿಸೋಡಿಯಾ, ಈ ಇಬ್ಬರು ಅಧಿಕಾರಿಗಳನ್ನು ವರ್ಗಾಯಿಸುವಂತೆ ಮೋದಿ ಯವರು ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೂರವಾಣಿ ಮೂಲಕ ಸೂಚಿಸಿದ್ದರು ಎನ್ನುವುದು ನಮಗೆ ಗೊತ್ತಾಗಿದೆ. ಮೋದಿ ಯಾವುದೇ ಮಟ್ಟಕ್ಕೂ ಹೋಗಬಲ್ಲರು. ಶಿಕ್ಷಣ ಮತ್ತು ಆರೋಗ್ಯ ಗುಣಮಟ್ಟ ಹದಗೆಟ್ಟರೆ ಮೋದಿಯವರೇ ಅದಕ್ಕೆ ಹೊಣೆಗಾರರಾಗುತ್ತಾರೆ ಎಂದು ಅವರು ಹೇಳಿದರು.
ಪ್ರತ್ಯೇಕ ಆದೇಶವೊಂದರಲ್ಲಿ ಜಂಗ್ ಅವರು ಐಎಎಸ್, ಡಾನಿಕ್ಸ್ ಮತ್ತು ಡಾಸ್ ಕೇಡರ್‌ಗಳ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗಳಿಗೆ ಒಪ್ಪಿಗೆ ನೀಡುವ ಸಕ್ಷಮ ಪ್ರಾಧಿಕಾರಗಳನ್ನು ಸೃಷ್ಟಿಸಿದ್ದು, ಆಪ್ ಸರಕಾರದ ಹಿಂದಿನ ಎಲ್ಲ ಆದೇಶಗಳನ್ನು ಅಮಾನತುಗೊಳಿಸಿದ್ದಾರೆ.





