ಪ್ರೀತಿಸಲು ನಿರಾಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಕಾಲೇಜಿಗೆ ನುಗ್ಗಿ ಕೊಂದು ಹಾಕಿದ ಯುವಕ

ಚೆನ್ನೈ,ಆ.31: ಯುವಕನೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಂದು ಹಾಕಿದ ಘಟನೆ ಚೆನ್ನೈಯಲ್ಲಿ ನಡೆದಿದೆ. ಕರೂರ್ ಇಂಜಿನಿಯರಿಂಗ್ ಕಾಲೇಜಿನ ಸೋನಿಯಾ ಎಂಬ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಂತಕನೇಟಿಗೆ ಸಿಲುಕಿ ಮೃತಳಾದವಳು, ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಪರಮಕ್ಕುಡಿಯ ಉದಯ ಕುಮಾರ್ ಎಂಬಾತ ಈ ಕೃತ್ಯವೆಸಗಿದ್ದು, ಈತ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದಾನೆ. ಘಟನೆ ನಡೆದು ಕೆಲವೇ ಗಂಟೆಗಳೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗ್ಗೆ ತರಗತಿ ಆರಂಭವಾಗುವುದಕ್ಕಿಂತ ಸ್ವಲ್ಪ ಮೊದಲು ತರಗತಿ ಕೋಣಿಗೆ ಬಂದಿದ್ದ ಉದಯಕುಮಾರ್ ಸೋನಿಯಾಳ ತಲೆಗೆ ಹಿಂದಿನಿಂದ ಬಲವಾಗಿ ಹೊಡೆದು ಓಡಿಹೋಗಿದ್ದ. ಕೂಡಲೇ ಇತರ ವಿದ್ಯಾರ್ಥಿಗಳು ಮತ್ತು ಕಾಲೇಜು ಅಧ್ಯಾಪಕರು ಸೋನಿಯಾಳನ್ನು ಸಮೀಪದ ಆಸ್ಪತ್ರೆಗೆ ಕರೆತಂದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಧುರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಸೋನಿಯಾ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ. ಸೋನಿಯಾಳ ತಂದೆ ಈ ಹಿಂದೆಯೇ ನಿಧನರಾಗಿದ್ದು,ತಾಯಿ ಚೆನ್ನೈಯ ಸಣ್ಣಕಂಪೆನಿಯೊಂದರಲ್ಲಿ ದುಡಿದು ಅವಳಿಗೆ ಇಂಜಿನಿಯರಿಂಗ್ ಕಲಿಸುತ್ತಿದ್ದರು. ವಿದ್ಯಾರ್ಥಿನಿಯ ಹತ್ಯೆಯನಂತರ ಕಾಲೇಜಿನಲ್ಲಿ ದಿಗ್ಭ್ರಮೆ ಸೃಷ್ಟಿಯಾಗಿದೆ. ತಕ್ಷಣ ಕಾಲೇಜಿಗೆ ರಜೆ ಘೋಷಿಸಲಾಯಿತು. ಹಾಗೂ ಪೊಲೀಸರು ಕಾಲೇಜಿಗೆ ಭಾರೀ ಬಂದೋಬಸ್ತು ಏರ್ಪಡಿಸಿದ್ದಾರೆ ಎಂದು ವರದಿಯಾಗಿದೆ.





