ಸ್ಪೀಡ್ ಮೆಶೀನ್ ಶೊಐಬ್ ಪ್ರಕಾರ ಅವರನ್ನು ಎದುರಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಗೊತ್ತೇ ?
ಸಚಿನ್ ? ಲಾರಾ ? ಉತ್ತರ ನೋಡಿದರೆ ನಿಮಗೆ ಆಶ್ಚರ್ಯವಾಗಲಿದೆ

ಕರಾಚಿ , ಆ.31: ತನ್ನ ವೃತ್ತಿ ಬದುಕಿನಲ್ಲಿ ನೋಡಿರುವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಝಮಮ್ ಉಲ್ ಹಕ್ ಎಲ್ಲರಿಗಿಂತಲೂ ಶ್ರೇಷ್ಠ ಬ್ಯಾಟ್ಸ್‌ಮನ್ ಹೀಗೆಂದವರು ಪಾಕ್‌ನ ಮಾಜಿ ಸ್ವೀಡ್ ಮೆಶೀನ್ ಶುಐಬ್ ಅಖ್ತರ್.
ಇಂಝಮಮ್ ಉಲ್ ಹಕ್ ಎಲ್ಲ ಬ್ಯಾಟ್ಸ್‌ಮನ್‌ಗಳಿಗಿಂತಲೂ ಶ್ರೇಷ್ಠ ಬ್ಯಾಟ್ಸ್‌ಮನ್. ಸಚಿನ್ ತೆಂಡುಲ್ಕರ್, ಬ್ರಯಾನ್ ಲಾರಾ ಮತ್ತು ರಿಕಿ ಪಾಂಟಿಂಗ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಔಟು ಮಾಡುವುದು ಕಷ್ಟ. ಆದರೆ ಇವರೆಲ್ಲರಿಂತಲೂ ಅಪಾಯಕಾರಿ ಬ್ಯಾಟ್ಸ್‌ಮನ್ ಇಂಝಮಮ್. ಅವರನ್ನು ಅಭ್ಯಾಸದ ವೇಳೆ ಔಟು ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ’’ ಎಂದು ಅಖ್ತರ್ ಅವರು ‘‘ದಿ ಸ್ಪೋರ್ಟ್ಸ್‌ಮ್ಯಾನ್ ’’ಗೆ ಮಾಜಿ ಆಲ್‌ರೌಂಡರ್ ವಸೀಂ ಅಕ್ರಮ್ ಜೊತೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶುಐಬ್ ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರ ದಾಳಿಯನ್ನು ಎದುರಿಸಲು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ನಡುಗುತ್ತಿದ್ದರು. ವೃತ್ತಿ ಬದುಕಿನಲ್ಲಿ 444 ವಿಕೆಟ್‌ಗಳನ್ನು(ಟೆಸ್ಟ್ 178, ಏಕದಿನ 247, ಟ್ವೆಂಟಿ-20ಯಲ್ಲಿ 19 ವಿಕೆಟ್) ಸಂಪಾದಿಸಿರುವ ಅಖ್ತರ್ ಅವರು ‘‘ ನಾನು ಇಂಝಮಮ್ ಅವರಂತೆ ಆಡುವ ಇನ್ನೊಬ್ಬ ಬ್ಯಾಟ್ಸ್‌ಮನ್‌ನ್ನು ನೋಡಿಲ್ಲ’’ ಎಂದು ಹೇಳಿದ್ದಾರೆ.
ಇಂಝಮಮ್ 120 ಟೆಸ್ಟ್‌ಗಳನ್ನು ಆಡಿದವರು. ಶುಐಬ್ 46 ಟೆಸ್ಟ್‌ಗಳನ್ನು ಆಡಿದ್ದಾರೆ. 16 ವರ್ಷಗಳ ವೃತ್ತಿ ಬದುಕಿನಲ್ಲಿ 34 ಟೆಸ್ಟ್‌ಗಳನ್ನು ಶುಐಬ್ ಅವರು ಇಂಝಮಮ್ ಜೊತೆ ಆಡಿದ್ದಾರೆ. ಇಂಝಮಮ್ ಅವರು ಅಫ್ಘಾನಿಸ್ತಾನ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಪಾಕಿಸ್ತಾನ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರು ತಂಡವನ್ನು ಉತ್ತಮವಾಗಿ ರೂಪಿಸಿ ಟೆಸ್ಟ್‌ನಲ್ಲಿ ತಂಡಕ್ಕೆ ನಂ.1 ಸ್ಥಾನ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇಂಝಮಮ್ 1992ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ತಂಡದ ಸದಸ್ಯರಾಗಿದ್ದರು. ಇಮ್ರಾನ್ ಖಾನ್ ನಾಯಕತ್ವದ ತಂಡದಲ್ಲಿ ವಸೀಂ ಅಕ್ರಂ ಮತ್ತು ಜಾವೇದ್ ಮಿಯಾಂದಾದ್ ಇದ್ದರು.
ಇಮ್ರಾನ್ ಖಾನ್ ನೇತೃತ್ವದ ಪಾಕ್ ತಂಡ ವಿಶ್ವಕಪ್ ಜಯಿಸುವಾಗ ಶುಐಬ್ 16 ವರ್ಷದ ಬಾಲಕನಾಗಿದ್ದರು. ತಾನು ಇಮ್ರಾನ್ ಖಾನ್ ಅವರಂತಹ ಶ್ರೇಷ್ಠ ಆಟಗಾರರಿಂದ ಪ್ರಭಾವಿತರಾಗಿರುವುದಾಗಿ ಶುಐಬ್ ಹೇಳಿದ್ದಾರೆ.
,,,,,,,





