ಈ 5 ಪ್ರಮಾದ ಎಸಗಿದರೆ ನಿಮ್ಮ ಯುಎಇ ಡ್ರೈವಿಂಗ್ ಲೈಸೆನ್ಸ್ ರದ್ದು!
ಎಚ್ಚರ!
.jpg)
ಚಾಲನಾ ಪರವಾನಗಿ ಪಡೆಯುವುದು ಅತೀ ಕಷ್ಟದ ಕೆಲಸ. ಹಾಗೇ ನಿಮ್ಮದೇ ವಾಹನವನ್ನು ನಿಭಾಯಿಸುವುದೂ ಬಹುದೊಡ್ಡ ಜವಾಬ್ದಾರಿ. ಗಲ್ಫ್ ನ್ಯೂಸ್ ವರದಿಯ ಪ್ರಕಾರ 2015ರಲ್ಲಿ ಶೇ.63ರಷ್ಟು ಅಪಘಾತಗಳು 18ರಿಂದ 35 ವರ್ಷಗಳ ನಡುವಿನ ಯುವಕರ ಕೈಯಿಂದ ಆಗಿದೆ. ಹೀಗಾಗಿ ಸಾರಿಗೆ ನಿಯಮಗಳನ್ನು ಪಾಲಿಸುವುದು ಅತೀ ಅಗತ್ಯ. ಯುಎಇಯಲ್ಲಿ ನೀವು ಈ ಕೆಳಗಿನ ತಪ್ಪುಗಳನ್ನು ಮಾಡಿದಲ್ಲಿ ತಕ್ಷಣವೇ ನಿಮ್ಮ ಡ್ರೈವಿಂಗ್ ಲೈಸೆನ್ಸಿಗೆ 24 ಕಪ್ಪು ಚುಕ್ಕೆಗಳನ್ನು ಪಡೆಯುವಿರಿ. ಹಾಗಾದಲ್ಲಿ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು. ತಪ್ಪುಗಳನ್ನು ಪದೇ ಪದೇ ಮಾಡಿದಲ್ಲಿ ಲೈಸೆನ್ಸ್ ಆಸೆ ಬಿಟ್ಟುಬಿಡಬೇಕಾದೀತು.
ಈ ಕೆಳಗಿನ ಐದು ತಪ್ಪುಗಳಿಂದ ಯುಎಇಯಲ್ಲಿ ನೀವು ತಕ್ಷಣವೇ ಲೈಸೆನ್ಸ್ ಮತ್ತು ಸಾಕಷ್ಟು ಹಣವನ್ನೂ ಕಳೆದುಕೊಳ್ಳುವಿರಿ.
1. ಆಲ್ಕೋಹಾಲ್, ಮಾದಕದ್ರವ್ಯ ಅಥವಾ ಅಂತಹ ವಸ್ತುಗಳನ್ನು ಸೇವಿಸಿ ವಾಹನ ಚಲಾಯಿಸುವುದು: ಡಿಯುಐ (ಮಾದಕ ದ್ರವ್ಯದ ಪ್ರಭಾವದಲ್ಲಿ ವಾಹನ ಚಾಲನೆ) ವಿಚಾರಕ್ಕೆ ಬಂದಾಗ ಯುಎಇ ಯಾವುದೇ ತಪ್ಪನ್ನು ಕ್ಷಮಿಸುವುದಿಲ್ಲ. ಪಟ್ಟಣದಲ್ಲಿ ನೀವು ರಾತ್ರಿ ದೊಡ್ಡ ಪಾರ್ಟಿಯಲ್ಲಿ ಭಾಗವಹಿಸಿದ ನಂತರ ಮರುದಿನ ವಾಹನ ಚಲಾಯಿಸುವಾಗ ನಿಮ್ಮ ರಕ್ತದಲ್ಲಿ ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಕಂಡುಬಂದಲ್ಲೂ ಗಂಭೀರ ಸಮಸ್ಯೆಯನ್ನು ಎದುರಿಸುವಿರಿ. ದಂಡಕಟ್ಟಬೇಕಾದ ಹಣ ಮತ್ತು ಕಾನೂನು ಕ್ರಮವನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ವಾಹನವನ್ನು 60 ದಿನಗಳಿಗೆ ವಶಪಡಿಸಿಕೊಳ್ಳಲಾಗುವುದು. ಹಾಗೆಯೇ ಲೈಸೆನ್ಸ್ ಮೇಲೆ ನೀವು 24 ಕಪ್ಪುಚುಕ್ಕೆಗಳನ್ನು ಪಡೆಯುವಿರಿ. ಹೀಗಾಗಿ ಮುಂದಿನ ಮೂರು ತಿಂಗಳ ಕಾಲ ವಾಹನ ಚಲಾಯಿಸುವ ಹಾಗಿಲ್ಲ.
2. ಟ್ರಾಂ ಜೊತೆಗೆ ಅಪಘಾತ: ದುಬೈನಲ್ಲಿ ಟ್ರಾಂ ಜೊತೆಗೆ ಆಟ ಬೇಡವೇ ಬೇಡ. ಟ್ರಾಂ ದಾಟದೆ ಕಾಯಲು ನೀಡಿದ ಕೆಂಪು ದೀಪವನ್ನು ಗಮನಿಸದೆ ಮುಂದೆ ಹೋದರೆ 5000 ದಿರ್ಹಂ ದಂಡ ಕಟ್ಟಬೇಕು ಮತ್ತು ಮೂರು ತಿಂಗಳ ಕಾಲ ಲೈಸೆನ್ಸ್ ರದ್ದಾಗುತ್ತದೆ. ಅಪಘಾತವಾದಲ್ಲಿ ಅಥವಾ ಯಾವುದೇ ವ್ಯಕ್ತಿಗೆ ಗಾಯವಾದಲ್ಲಿ ದಂಡ ದ್ವಿಗುಣಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಅಪಘಾತದಿಂದ ಯಾರಾದರೂ ಜೀವ ಕಳೆದುಕೊಂಡರೆ ಚಾಲಕನ ಮೇಲೆ 30,000 ದಿರ್ಹಂ ದಂಡ ಹೇರಲಾಗುತ್ತದೆ ಮತ್ತು ವರ್ಷದವರೆಗೆ ಲೈಸೆನ್ಸ್ ರದ್ದಾಗುತ್ತದೆ. ಮುಂದುವರಿದು ಪೊಲೀಸರೂ ಆರೋಪ ದಾಖಲಿಸಿಕೊಂಡು ಪ್ರತ್ಯೇಕ ವಿಚಾರಣೆ ನಡೆಯಬಹುದು.
3. ನಂಬರ್ ಪ್ಲೇಟ್ ಇಲ್ಲದ ವಾಹನ ಚಾಲನೆ: ನಿಮ್ಮ ಕಾರಿಗೆ ನಂಬರ್ ಪ್ಲೇಟ್ ಇದೆಯೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಾಗದಿದ್ದಲ್ಲಿ ವಾಹನದ ನಿಯಂತ್ರಣ ನಿಮ್ಮ ಕೈಯಲ್ಲಿರುವುದಿಲ್ಲ. ಹಾಗೆ ಮಾಡುವುದರಿಂದ ನಿಮಗೆ 1000 ದಿರ್ಹಂ ದಂಡವಾಗಬಹುದು ಮತ್ತು ನಿಮ್ಮ ವಾಹನವನ್ನು ಎರಡು ತಿಂಗಳ ಕಾಲ ವಶಕ್ಕೆ ತೆಗೆದುಕೊಳ್ಳಬಹುದು. ಈ ತಪ್ಪಿಗಾಗಿ ನಿಮ್ಮ ಲೈಸೆನ್ಸ್ ಮೇಲೆ 24 ಕಪ್ಪು ಚುಕ್ಕೆಗಳು ಬರುವ ಕಾರಣ ತಕ್ಷಣವೇ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದಾಗಿಬಿಡುತ್ತದೆ.
4. ಅಪಘಾತಗಳಿಂದ ಇತರರಿಗೆ ಗಾಯವಾದರೂ ವಾಹನ ನಿಲ್ಲಿಸದೆ ಮುಂದೆ ಸಾಗುವುದು: ಇಂತಹ ಅಪರಾಧ ಮಾಡಿದಲ್ಲಿ ಅದನ್ನು ಕ್ರಿಮಿನಲ್ ಕೇಸೆಂದು ಪರಿಗಣಿಸಲಾಗುವುದು. ಅಪಘಾತ ಮಾಡಿ ಮತ್ತೊಬ್ಬ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಗಾಯ ಮಾಡಿದ ಮೇಲೂ ಅವರನ್ನು ಅಲ್ಲೇ ಬಿಟ್ಟು ವಾಹನ ಚಲಾಯಿಸಿ ಮುಂದೆ ಸಾಗಿದಲ್ಲಿ, ನಿಮ್ಮ ಕಾರನ್ನು 60 ದಿನಗಳ ಕಾಲ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ತಕ್ಷಣವೇ 24 ಕಪ್ಪು ಚುಕ್ಕೆಗಳು ನಿಮ್ಮ ಲೈಸೆನ್ಸಿಗೆ ಬರುವ ಕಾರಣ 60 ದಿನಗಳ ಕಾಲ ಲೈಸೆನ್ಸ್ ರದ್ದಾಗುತ್ತದೆ. ದಂಡವನ್ನು ನ್ಯಾಯಾಲಯ ನಿರ್ಧರಿಸಲಿದೆ.
5. ಟ್ರಕ್‌ಗಳಿಂದ ಅಪಾಯಕಾರಿ ಓವರ್‌ಟೇಕ್: ಬಹಳಷ್ಟು ಮಂದಿಗೆ ಇದು ಅನ್ವಯವಾಗದೆ ಇರಬಹುದು. ಆದರೆ ನೀವು ಎಚ್‌ಜಿವಿ ಡ್ರೈವರ್ ಆಗಿದ್ದು ರಸ್ತೆಗಳಲ್ಲಿ ಅಪಾಯಕಾರಿಯಾದ ಓವರ್ ಟೇಕ್ ಮಾಡುವುದು ರೂಢಿಸಿಕೊಂಡಿದ್ದರೆ ದುಬೈನಲ್ಲಿ ಅದು ನಡೆಯದು. ಹೀಗೆ ಮಾಡುವುದು 24 ಕಪ್ಪು ಚುಕ್ಕೆಗಳಿಗೆ ಕಾರಣವಾಗಲಿದೆ. ಆ ಕಾರಣದಿಂದ ಮುಂದಿನ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದಾಗಲಿದೆ. ಹೀಗಾಗಿ ನೀವು ಟ್ರಕ್ ಚಲಾಯಿಸುತ್ತಿರುವಾಗ ಚಕ್ರಗಳತ್ತ ಗಮನಹರಿಸಿ ಮತ್ತು ಹೆಚ್ಚು ಜಾಗರೂಕವಾಗಿ ವಾಹನ ಚಲಾಯಿಸಿ.
ಕೃಪೆ: wheels.ae







