ಬೀದಿನಾಯಿಗಳನ್ನು ಕೊಲ್ಲಬಾರದು: ಕೇರಳ ಸರಕಾರಕ್ಕೆ ಪ್ರಾಣಿರಕ್ಷಣಾ ಮಂಡಳಿ ನೋಟಿಸ್

ಹೊಸದಿಲ್ಲಿ,ಆಗಸ್ಟ್ 31: ಬೀದಿನಾಯಿಗಳನ್ನು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಕೇಂದ್ರ ಪ್ರಾಣಿರಕ್ಷಣಾ ಮಂಡಳಿ ಕೇರಳ ರಾಜ್ಯಸರಕಾರಕ್ಕೆ ನೋಟಿಸು ಜಾರಿಗೊಳಿಸಿದೆ ಎಂದು ವರದಿಯಾಗಿದೆ. ಬಂಜೆಗೊಳಿಸುವ ಮೂಲಕ ಬೀದಿನಾಯಿ ಸಮಸ್ಯೆಯನ್ನು ಬಗೆಹರಿಸಬಹುದೆಂದು ಮಂಡಳಿ ಹೇಳಿದೆ. ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಲು ಬಂಜೆಗೊಳಿಸುವುದು ಉಚಿತವಾದ ಮಾರ್ಗವಾಗಿದೆ. ಬೀದಿ ನಾಯಿಗಳನ್ನು ಬಂಜೆಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಬೇಕು. ನಾಯಿಗಳನ್ನು ಕೊಲ್ಲುವ ಕ್ರಮವನ್ನು ಯಾವಕಾರಣಕ್ಕೂ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ ವಿಷಯದ ಕುರಿತು ಕೇಂದ್ರ ಪ್ರಾಣಿರಕ್ಷಣಾ ಮಂಡಳಿಯ ಕಾರ್ಯದರ್ಶಿಯೂ ರಾಜ್ಯಸರಕಾರಕ್ಕೆ ನೋಟಿಸು ಕಳುಹಿಸಿದ್ದಾರೆ.
ವೈಲ್ಡ್ ಅನಿಮಲ್ ಪ್ರೊಟೆಕ್ಷನ್ ಆ್ಯಕ್ಟ್‌ನ್ನು ಬೆಟ್ಟು ಮಾಡಿ ಬೀದಿನಾಯಿಗಳ ಇತಿಶ್ರೀ ಕಾನೂನುಬಾಹಿರವೆಂದು ಕೇಂದ್ರ ಪ್ರಾಣಿರಕ್ಷಣಾ ಮಂಡಳಿ ಸೂಚಿಸಿದೆ. ಬೀದಿನಾಯಿಗಳನ್ನು ಕೊಲ್ಲುವ ತೀರ್ಮಾನಕೈಗೊಂಡರೆ ಎಲ್ಲ ನಾಯಿಗಳನ್ನು ಕೊಲ್ಲುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳಬಹುದೆಂದು ಅದು ಬೆಟ್ಟುಮಾಡಿದೆ ಎಂದು ವರದಿತಿಳಿಸಿದೆ.





