‘ಮತಾಂತರ’ಘಟನೆಗೆ ಖಂಡನೆ : ಮಂಡೆಕೋಲಿನಲ್ಲಿ ಪ್ರತಿಭಟನೆ

ಸುಳ್ಯ, ಆ.31: ಮಂಡೆಕೋಲಿನ ಮಾವಂಜಡ್ಕದ ಸತೀಶ್ ಆಚಾರ್ಯ ಎಂಬ ಯುವಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ ಎಂದು ಆರೋಪಿಸಿ ಮಂಡೆಕೋಲು ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಂಡೆಕೋಲು ಗ್ರಾ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮಾತನಾಡಿ, ನಮ್ಮೂರಿನ ಯುವಕನೊಬ್ಬನ ತಲೆಯಲ್ಲಿ ಕೆಟ್ಟ ಯೋಚನೆಗಳನ್ನು ತುಂಬಿ ಆತನನ್ನು ವ್ಯವಸ್ಥಿತವಾಗಿ ಮತಾಂತರಗೊಳಿಸುವ ಪ್ರಕ್ರಿಯೆ ನಡೆದಿದೆ. ಈ ಮತಾಂತರದ ಹಿಂದೆ ಷಡ್ಯಂತ್ರ ಅಡಗಿದೆ. ಆ ಯುವಕ ಯಾಕಾಗಿ ಮತಾಂತರಗೊಂಡ, ಮತ್ತು ಯಾರೂ ಮತಾಂತರಗೊಳಿಸಿದರು ಎನ್ನುವುದನ್ನು ಪೊಲೀಸ್ ಇಲಾಖೆ ತನಿಖೆ ನಡೆಸಿ ಈ ಘಟನೆಗೆ ಇತೀಶ್ರೀ ಹಾಡಬೇಕು. ಮುಂದೆ ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕ್ರಿಯೆ ನಡೆಯಬಾರದು. ಹಾಗೇನಾದರೂ ಆದರೆ ಅಂತಹ ಮತೀಯ ಶಕ್ತಿಯ ವಿರುದ್ಧ ಎಲ್ಲರೂ ಒಂದುಗೂಡಿ ಹೋರಾಟ ಮಾಡುವ ಪರಿಸ್ಥಿತಿ ಬರಬಹುದು ಎಂದರು.
ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದರ್ಶನ್ ಪಾತಿಕಲ್ಲು, ಗ್ರಾ.ಪಂ.ಸದಸ್ಯೆ ವಿನುತಾ ಪಾತಿಕಲು, ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಲಕ್ಷ್ಮಣ್ ಉಗ್ರಾಣಿಮನೆ, ಜಾಲ್ಸೂರು ಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಕುಮಾರ್ ಆಚಾರ್, ತಾ.ಪಂ. ಮಾಜಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ಗ್ರಾ.ಪಂ. ಅದ್ಯಕ್ಷೆ ಮೋಹಿನಿ ಚಂದ್ರಶೇಖರ್, ಸದಸ್ಯ ಶುಕರ ಬೊಳುಗಲ್ಲು, ವಿ.ಹಿಂ.ಗ್ರಾಮ ಸಮಿತಿ ಅಧ್ಯಕ್ಷ ಯೋಗೀಶ್ ಪಂಜಿಕಲ್ಲು, ಗ್ರಾ.ಪಂ. ಮಾಜಿ ಸದಸ್ಯ ಪದ್ಮನಾ ಚೌಟಾಜೆ, ಜಾನಕಿ ಕಣೆಮರಡ್ಕ, ಚಂದ್ರಶೇಖರ ಪೆರಾಜೆ ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್ ಪೆರಾಜೆ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲ, ಮಂಡೆಕೋಲು ಸಹಕಾರಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ರೈ, ಜನಾರ್ದನ ಬರೆಮೇಲು, ಕರುಣಾಕರ ಬರೆಮೇಲು, ಜನಾರ್ದನ ಬೊಳುಗಲ್ಲು ಮೊದಲಾದವರಿದ್ದರು.
ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಶ್ರೀಕಾಂತ್ ಮಾವಂಜಿ ವಂದಿಸಿದರು.







