‘ಪರಸ್ಪರ ಪ್ರೀತಿ ವಿಶ್ವಾಸ ಧರ್ಮಗಳ ನಡುವಿನ ಶಾಂತಿಗೆ ಪೂರಕ’
ಶಾಂತಿ, ಮಾನವೀಯತೆ ಅಭಿಯಾನ
ತರೀಕೆರೆ, ಆ.30: ಸಮಾಜದಲ್ಲಿ ಜಾತಿ ಜಾತಿಯ ನಡುವೆ ಹೊಂದಾಣಿಕೆ, ಮಾನವೀಯತೆ ಮೌಲ್ಯಗಳನ್ನು ಪ್ರತಿಪಾದಿಸುವುದರ ಜೊತೆಗೆ ಸರ್ವ ಧರ್ಮದ ಸಹಿಷ್ಣುತೆ ಉಂಟಾದಲ್ಲಿ ಎಲ್ಲ ಧರ್ಮಗಳೂ ಶಾಂತಿ ಮತ್ತು ಮಾನವೀಯತೆಯನ್ನು ಸಾರುವ ಬದುಕು ನಡೆಸಬಹುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಪ್ರಮುಖ ಶೇಕ್ ಜಾವಿದ್ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಆಶ್ರಯದಲ್ಲಿ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಅಂಗವಾಗಿ ಪಟ್ಟಣದ ಬಾಪೂಜಿ ಕಾಲನಿಯಲ್ಲಿ ಪರಸ್ಪರ ಸಾಮರಸ್ಯ, ಸಮಾಜದ ಒಳಿತು ರಾಷ್ಟ್ರ ಪ್ರೇಮ, ಅರಿವು ಮೂಡಿಸುವ ಜಾಥಾದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು. ಮನುಷ್ಯ ಸಂಬಂಧಗಳು ವ್ಯಾಪಾರೀಕರಣವಾದರೆ ಸಂಬಂಧಗಳು ಒಡೆದು ಪರಸ್ಪರ ವೈರತ್ವ ಬೆಳೆದು ಸಹಜವಾಗಿ ಅಜಾಗರೂಕತೆ ಉಂಟಾಗಿ ಅಶಾಂತಿ ನೆಲೆಸುತ್ತದೆ. ಅಶಾಂತಿಯಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ದ್ವೇಷ ಮಾನವೀಯ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತದೆ ಎಂದರು
ಪುರಸಭಾ ಅಧ್ಯಕ್ಷ ಆದಿಲ್ ಪಾಷಾ ಮಾತನಾಡಿ, ವಿದ್ಯೆ ಅತ್ಯಂತ ಅಮೂಲ್ಯವಾದ ವಸ್ತು. ಮೌಢ್ಯ ಕಾನೂನಿನ ಅರಿವಿಲ್ಲದೆ ಸಂವಿಧಾನದ ಹಕ್ಕುಗಳ ಬಗ್ಗೆ ಗೊತ್ತಿಲ್ಲದೇ ಅನಿವಾರ್ಯವಾಗಿ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳೇ ಹೆಚ್ಚು. ಮುಗ್ಧ ಜನರ ಬದುಕಿನಲ್ಲಿ ಅರಾಜಕತೆ ಉಂಟುಮಾಡಿ ಸಮಾಜದ ಸಾಮರಸ್ಯವನ್ನು ಒಡೆಯುವುದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಮನುಷ್ಯ ಬದುಕಿ ಸಾಯುವುದನ್ನು ಮರೆತು ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಕನಸುಗಳನ್ನು ಹುಟ್ಟು ಹಾಕುವ ಅದಕ್ಕೆ ಬೇಕಾದ ಸಹಕಾರವನ್ನು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಮಾಡುತ್ತಿದೆ. ಎಂದರು. ಡಿಎಸ್‌ಎಸ್ ನ ನಾಗರಾಜ್ ಮಾತನಾಡಿ, ಪರಸ್ಪರ ವಿಶ್ವಾಸ, ಜಾತಿ-ಜಾತಿಯ ನಡುವೆ ಬಾಂಧವ್ಯ ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲ ವರ್ಗಗಳಲ್ಲೂ ಬಂದರೆ ಅರಾಜಕತೆ ಉಂಟಾಗಲು ಸಾಧ್ಯವೇ ಇಲ್ಲ ಎಂದರು. ದಲಿತ ಮುಖಂಡ ಅಣ್ಣಯ್ಯ ಮಾತನಾಡಿ, ಯಾರೇ ಆಗಲಿ ಪರಿಸ್ಥಿತಿಯ ಲಾಭ ಪಡೆದು ಅಶಾಂತಿಗೆ ಪ್ರೇರಣೆ ನೀಡಿದರೆ ಎಲ್ಲ ಧರ್ಮದ ಮುಖಂಡರುಗಳು ಅದನ್ನು ಖಂಡಿಸಿ ಹತ್ತಿಕ್ಕುವ ದೃಢ ನಿರ್ಧಾರ ಮಾಡಬೇಕೆಂದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಪುಟ್ಟಮ್ಮ ಮಾತನಾಡಿ, ಎಲ್ಲ ಜನಾಂಗದವರು ಹಬ್ಬ ಹರಿದಿನಗಳಲ್ಲಿ ಪರಸ್ಪರ ಆಹ್ವಾನಿಸಿ ಸಂತೋಷ ಕೂಟಗಳನ್ನು ನೆರವೇರಿಸಿಕೊಂಡು ಆತ್ಮೀಯ ಭಾವನೆಯನ್ನು ಹುಟ್ಟು ಹಾಕಿಕೊಂಡರೆ ಸಮಾಜದಲ್ಲಿ ನೆಮ್ಮದಿ ಸಾಧಿಸಬಹುದು ಎಂದರು. ಈ ಸಂದರ್ಭದಲ್ಲಿ ನಝೀರ್ ಅಹ್ಮದ್, ಸೈಯದ್ ಇಸ್ಮಾಯೀಲ್, ಶೇಕ್ ಜಾವೀದ್, ನೌಶಾನ್ ಬಾಷಾ ಮತ್ತಿತರರು ಉಪಸ್ಥಿತರಿದ್ದರು.







