ನಾಯಕತ್ವ ಗುಣ ಬೆಳೆಸುವಲ್ಲಿ ವಿದ್ಯಾರ್ಥಿ ಸಂಘಗಳು ಸಹಕಾರಿ: ನಾಗೇಶ್
ವಿದ್ಯಾರ್ಥಿ ಸಂಘ, ವಿಜ್ಞಾನ ಸಂಘ ಉದ್ಘಾಟನಾ ಕಾರ್ಯಕ್ರಮ
ಚಿಕ್ಕಮಗಳೂರು, ಆ.31: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಹೇಳಿದರು.
ಅವರು ನಗರದ ಮಲೆನಾಡು ವಿದ್ಯಾ ಸಂಸ್ಥೆಯ ಪರ್ವತವರ್ಧನ ಎಂ.ಎಲ್ ವಾಸುದೇವಮೂರ್ತಿ ಬಾಲಿಕ ಪ್ರೌಢಶಾಲೆಯ 2016-17ನೆ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಸಂಘಗಳು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯು ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೆ ಸ್ಥಾನವನ್ನು ಪಡೆದುಕೊಂ ಡಿದ್ದು, ಈ ಸಾಲಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಳ್ಳ್ಳುವುದು ನಮ್ಮ ಮುಂದಿರುವ ಗುರಿ ಎಂದರು.
ವಿದ್ಯಾರ್ಥಿ ಸಂಘಗಳಿಗೆ ಹಾಗೂ ವಿಜ್ಞ್ಞಾನ ಸಂಘಗಳಿಗೆ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಸುಶೀಲಾ ಮಾತನಾಡಿ, ಜಾತಿ, ಧರ್ಮವಿಲ್ಲದೆ ವಿದ್ಯಾರ್ಥಿಗಳಲ್ಲಿ ಸಂಘಗಳಿಂದ ಏಕತಾ ಮನೋಭಾವ ಬೆಳೆಯುತ್ತದೆ. ಇಲ್ಲಿ ಮುಖ್ಯವಾಗಿ ಒಬ್ಬ ವಿದ್ಯಾರ್ಥಿಯಲ್ಲಿ ಇರಬೇಕಾದ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿಪುಲವಾದ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ವಿದ್ಯಾರ್ಥಿ ಸಂಘಗಳಿಂದ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡುವ ಮೂಲಕ ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು. ವಿಜ್ಞ್ಞಾನ ಎಂದರೆ ಸಂಶೋಧನೆ ಮಾಡುವಂತದ್ದು, ಸಂಶೋಧನೆಗೆ ವಿದ್ಯಾರ್ಥಿ ಸಂಘಗಳು ಉಪಯುಕ್ತವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದರು.
ನಮ್ಮ ಪೂರ್ವಜರು ಧಾರ್ಮಿಕತೆಯಲ್ಲಿಯೂ ಸಹ ವಿಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ವಿಜ್ಞಾನಕ್ಕೆ ತನ್ನದೆ ಆದ ಇತಿಹಾಸವಿದೆ. ವಿದ್ಯಾರ್ಥಿಗಳು ಈ ಸಂಘಗಳಿಂದ ಧೈರ್ಯ, ತಾಳ್ಮೆ, ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಪಟ್ಟಣಪ್ರದೇಶದ ವಿದ್ಯಾರ್ಥಿಗಳಿಗೆ ಜ್ಞ್ಞಾನ ಸಂಪಾದನೆಗೆ ವಿಪುಲವಾದ ಅವಕಾಶವಿದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜ್ಞಾನ ಸಂಪಾದನೆಗೆ ಅವಕಾಶಗಳ ಕೊರತೆಯಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಜ್ಞ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ಕೇಶವಮೂರ್ತಿ ವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಜಯಶ್ರೀ ಜೋಶಿ, ವಿದ್ಯಾರ್ಥಿಗಳು, ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.







