ಕಾಡಾನೆ ದಾಳಿ ಪ್ರಕರಣ: ಪರಿಹಾರ ವಿತರಣೆ
ಇಲಾಖೆಯ ಉನ್ನತ ಅಧಿಕಾರಿಗಳ ಅಮಾನತಿಗೆ ಆಗ್ರಹ

ವೀರಾಜಪೇಟೆ, ಆ.31: ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಅವರೆಗುಂದ ಬಸವನಹಳ್ಳಿ ಎಂಬಲ್ಲಿ ರವಿವಾರ ಸಂಭವಿಸಿದ ಒಂಟಿ ಸಲಗ ದಾಳಿಯಿಂದ ಚೆಲುವ(35)ಎನ್ನುವ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಅರಣ್ಯ ಇಲಾಖೆಯ ಜಿಲ್ಲೆಯ ಹಿರಿಯ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು, ಇಲಾಖೆಯ ಉನ್ನತ ಮಟ್ಟದಲ್ಲಿ ಆಂತರಿಕ ವಿಚಾರಣೆಗೊಳಪಡಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಆಗ್ರಹಿಸಿದರು.
ಜನತಾದಳದಿಂದ ಬಸವನಹಳ್ಳಿಯ ಮೃತ ಚೆಲುವನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಹಾಡಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ ಬಡ ಕೂಲಿ ಕಾರ್ಮಿಕರು, ಬಡವರು, ದಲಿತರು ನಿರಂತರವಾಗಿ ಸಾವು ನೋವುಗಳಿಗೆ ಬಲಿಯಾಗುತ್ತಿದ್ದಾರೆ. ದುರಂತದ ಬಳಿಕ ಇಲಾಖೆಯ ಅಧಿಕಾರಿಗಳು ಚೆಕ್ ಪುಸ್ತಕಗಳನ್ನು ಜೇಬಿನಲ್ಲಿಟ್ಟುಕೊಂಡು ಸಾಧನೆ ಮಾಡಿದ ರೀತಿಯಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡುತ್ತಿರುವುದುವಿಷಾದನೀಯ ಎಂದರು.
ಸರಕಾರ ಕಾರ್ಮಿನೊಬ್ಬ ಕಾಡಾನೆ ದುರಂತಕ್ಕೊಳಗಾಗಿ ಸಾವನ್ನಪ್ಪಿದರೆ ಆತನ ಜೀವಕ್ಕೆ ರೂ.5 ಲಕ್ಷ ವೌಲ್ಯ ನಿಗದಿಪಡಿಸಿದೆ. ಕನಿಷ್ಠ 10 ಲಕ್ಷ ರೂ. ನಿಗದಿಪಡಿಸಬೇಕು. ಮುಂಜಾಗ್ರತಾ ಕ್ರಮವಾಗಿ ಕಾಡಾನೆ ದುರಂತದಿಂದ ಕಾರ್ಮಿಕರನ್ನು ರಕ್ಷಿಸುವ ಹೊಣೆ ಸರಕಾರದ್ದು ಹಾಗೂ ಅರಣ್ಯ ಇಲಾಖೆಯದ್ದಾಗಿದೆ ಎಂದರು.
ಇದೇ ವೇಳೆ ಸಂಕೇತ್ ಪೂವಯ್ಯ ಅವರು ವೈಯಕ್ತಿಕವಾಗಿ ಮೃತ ಚೆಲುವನ ಹಿರಿಯ ಸಹೋದರಿಗೆ ರೂ. 10 ಸಾವಿರ ಪರಿಹಾರವಾಗಿ ನೀಡಿದರು. ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ತಾಲೂಕು ಸಮಿತಿ ಅಧ್ಯಕ್ಷ ಮನಿಯಪಂಡ ಸಿ.ಬೆಳ್ಳಿಯಪ್ಪ ಅವರು ಮಾತನಾಡಿದರು.
ಭೇಟಿ ನೀಡಿದ ವೇಳೆ ಪಕ್ಷದ ಕಾರ್ಯಕರ್ತರಾದ ಚನ್ನನಕೋಟೆಯ ವಿ.ಸಿ.ದೇವರಾಜು, ಎಂ.ಕೆ.ವಸಂತ್, ಗೂಡ್ಲೂರಿನ ಜಿ.ಬಿ.ಸೊೀಮಯ್ಯ, ಬಿ.ಎಂ.ಕಿರಣ್, ಸವಿಕುಮಾರ್, ಮಾಲ್ದಾರೆ ಗ್ರಾಪಂ ಮಾಜಿ ಅಧ್ಯಕ್ಷ ಕೂಡ್ಲಲನ ರಝಾಕ್, ಹಾಲಿ ಉಪಾಧ್ಯಕ್ಷ ಎಂ.ರಾಜು ಮತ್ತಿತರರಿದ್ದರು.







