ಪ್ರತೀ ಕುಟುಂಬದ ಹೆಸರು ನೋಂದಣಿಗೆ ಡಿಸಿ ಮನವಿ
ಜಿಲ್ಲಾಮಟ್ಟದ ಯಶಸ್ವಿನಿ ಸಮಿತಿ ಸಭೆ

ಮಡಿಕೇರಿ, ಆ.31: ಯಶಸ್ವಿನಿ ಯೋಜನೆಯಡಿ ಆರೋಗ್ಯ ಸೇವೆ ಪಡೆಯುವಂತಾಗಲು ಪ್ರತಿಯೊಂದು ಕುಟುಂಬ ಹೆಸರು ನೋಂದಾಯಿಸಿಕೊಳ್ಳುವಂತೆ ಸಹಕಾರ ಇಲಾಖೆ ಉಪ ನಿಬಂಧಕರಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಯಶಸ್ವಿನಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮತ್ತು ನಗರದ ಎಲ್ಲ ಜನರು ಯಶಸ್ವಿನಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಆರೋಗ್ಯ ಸೇವೆ ಪಡೆಯಲು ಯಶಸ್ವಿನಿ ಯೋಜನೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಕ್ರಮವಹಿಸುವಂತೆ ಸಹಕಾರ ಇಲಾಖೆ ಉಪ ನಿಬಂಧಕರಿಗೆ ಸಲಹೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಕುಟುಂಬಗಳು ಯಶಸ್ವಿನಿ ಯೋಜನೆಯಡಿ ಹೆಸರು ನೋಂದಣಿಗೆ ಬಾಕಿ ಇದ್ದು, ಹೆಸರು ನೋಂದಣಿ ಮಾಡಿಸದಿರುವ ಕುಟುಂಬಗಳು ನೋಂದಣಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಸಹಕಾರ ಇಲಾಖೆಯ ಸೇವಾ ಸೌಲಭ್ಯಗಳನ್ನು ಪರಿಶಿಷ್ಟರು ಪಡೆಯುವಂತಾಗಲು ಜಾಗೃತಿ ಮೂಡಿಸಬೇಕಿದೆ. ಜಿಲ್ಲೆಯಲ್ಲಿ ಯಶಸ್ವಿನಿ ನೋಂದಣಿ ಸಂಬಂಧಿಸಿದಂತೆ ಇನ್ನಷ್ಟು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚಿಸಿದರು.
ಸಹಕಾರಿ ಇಲಾಖೆಯ ಉಪ ನಿಬಂಧಕ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2016-17ನೆ ಸಾಲಿಗೆ ಒಟ್ಟು ಗ್ರಾಮೀಣ ಯೋಜನೆಯಡಿ ಒಂದು ಲಕ್ಷ ಜನರನ್ನು ನೋಂದಾಯಿಸಲು, ನಗರ ಯೋಜನೆಯಡಿ ಹತ್ತು ಸಾವಿರ ಸದಸ್ಯರನ್ನು ನೋಂದಾಯಿಸಲು ಗುರಿ ಹಂಚಿಕೆ ಮಾಡಲಾಗಿದೆ. ಒಂದೇ ಕುಟುಂಬದ ಐದು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರು ನೋಂದಣಿ/ನವೀಕರಿಸಿದ್ದಲ್ಲಿ ಶೇ.15ರ ರಿಯಾಯಿತಿ ಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು. ಗ್ರಾಮೀಣ ಯೋಜನೆಯಡಿ ಗ್ರಾಮೀಣ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆದು ಮೂರು ತಿಂಗಳು ಪೂರೈಸಿದ ಮುಖ್ಯ ಸದಸ್ಯ ಮತ್ತು ಅವರ ಕುಟುಂಬದ ಅವಲಂಬಿತ ಎಲ್ಲ ಸದಸ್ಯರು ನಿಗದಿತ ವಂತಿಗೆ 300ರೂ. ಹಾಗೂ ಎಸ್ಸಿ,ಎಸ್ಟಿ ಸದಸ್ಯರು 50 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆಎಂದರು. ನವಜಾತ ಶಿಶುವಿನಿಂದ ಪ್ರಾರಂಭಿಸಿ ಜೀವಿತಾವಧಿವರೆಗೆ ಒಬ್ಬ ವ್ಯಕ್ತಿ ಸದಸ್ಯರಾಗಲು ಅವಕಾಶವಿದೆ. ನಗರ ಯೋಜನೆಯಡಿ ನಗರ ಭಾಗದ ಸಹಕಾರಿ ಸಂಗಳಲ್ಲಿ ಸದಸ್ಯತ್ವ ಪಡೆದು ಮೂರು ತಿಂಗಳು ಪೂರೈಸಿದ ಮುಖ್ಯ ಸದಸ್ಯ ಮತ್ತು ಅವರ ಕುಟುಂಬದ ಅವಲಂಬಿತ ಎಲ್ಲ ಸದಸ್ಯರು ನಿಗದಿತ ವಂತಿಗೆ 710 ರೂ. ಹಾಗೂ ಎಸ್ಸಿ,ಎಸ್ಟಿ ಸದಸ್ಯರು 110 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಹಕಾರಿ ಇಲಾಖೆಯ ಉಪ ನಿಬಂಧಕರಿಗೆ ತಿಳಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಮಾತನಾಡಿ, ಯಶಸ್ವಿನಿ ಯೋಜನೆಯಡಿ ಹಲವು ಕುಟುಂಬಗಳು ನೋಂದಾಯಿಸಿದ್ದು, ಸಾಕಷ್ಟು ಕುಟುಂಬಗಳು ಹೆಸರು ನೆ
ಂದಾಯಿಸಲು ಬಾಕಿ ಇವೆ ಎಂದರು. ಜಿಲ್ಲಾ ಆಸ್ಪತ್ರೆಯ ಡಾ.ಅಝೀಜ್ ಅವರು ಯಶಸ್ವಿನಿ ಯೋಜನೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಯಶಸ್ವಿನಿ ಯೋಜನೆವ್ಯಾಪ್ತಿಯ ಆಸ್ಪತ್ರೆಯ ಪ್ರತಿನಿಧಿಗಳು ಭಾಗವಹಿಸಿದ್ದರು.







