ಸೊರಬ: ಪಟ್ಟಣ ಪಂಚಾಯತ್ ವಿಶೇಷ ಸಭೆ

ಸೊರಬ, ಆ.31: ಪಟ್ಟಣ ಪಂಚಾಯತ್‌ನ ವಿಶೇಷ ಸಭೆಯು ಪಪಂ ಅಧ್ಯಕ್ಷ ಜಿ. ಪ್ರಶಾಂತ ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಚೆೇರಿ ಸಭಾಂಗಣದಲ್ಲಿ ನಡೆಯಿತು.
ಪಪಂ ಎದುರಿಗೆ ವೃತ್ತ ನಿರ್ಮಿಸಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪಅವರ ಹೆಸರಿಡುವಂತೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರೆ, ಪಪಂ ಸದಸ್ಯೆ ರತ್ನಮ್ಮ ಕೆ.ನಾಗಪ್ಪ ಅವರು ವಿರೋಧ ವ್ಯಕ್ತಪಡಿಸಿದರು.
ಅಂಬೇಡ್ಕರ್ ಬಡಾವಣೆಗೆ ಹೊಂದಿಕೊಂಡಿರುವ ಪಪಂ ಎದುರಿನ ವೃತ್ತಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸಿ ಅವರ ಹೆಸರಿಡುವಂತೆ ಒತ್ತಾಯಿಸಿದ ಅವರು, ಈ ಹಿಂದೆ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅನುಮೋದನೆಗೆ ಕಳುಹಿಸಿದ ಬಗ್ಗೆ ಮಾಹಿತಿ ದೊರೆತಿದೆ. ಏಕಾಏಕಿ ಇಂತಹ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಈ ವಿಷಯದಲ್ಲಿ ಎಲ್ಲರೂ ಸೇರಿ ಒಮ್ಮತದ ಅಭಿಪ್ರಾಯ ಸೂಚಿಸುವುದು ಸೂಕ್ತ ಎಂದು ಸಭೆಯ ಗಮನಕ್ಕೆ ತಂದರು. ಪಟ್ಟಣದಲ್ಲಿ ಹಲವು ವೃತ್ತಗಳಿದ್ದು, ಅದರಲ್ಲಿ ಪ್ರಮುಖ ವೃತ್ತವೊಂದನ್ನು ಗುರುತಿಸಿ, ಅಂಬೇಡ್ಕರ್ ಅವರ ಹೆಸರನ್ನು ಇಡಬಹುದಾಗಿದೆ. ಈ ಹಿಂದಿನ ಸಭೆಗಳಲ್ಲಿ ಪಪಂ ಎದುರಿನ ವೃತ್ತಕ್ಕೆ ಬಂಗಾರಪ್ಪಅವರ ಹೆಸರಿಡಲು ಚರ್ಚಿಸಲಾಗಿದ್ದು, ಸಭೆಯ ಅನುಮೋದನೆಯನ್ನು ಪಡೆಯಲಾಗಿತ್ತು ಎಂದು ಸಭೆಯಲ್ಲಿದ್ದ ಪಪಂ ಸದಸ್ಯರಾದ ಮಂಚಿ ಹನುಮಂತಪ್ಪ, ಮೆಹಬೂಬಿ, ಎಂ.ಡಿ. ಉಮೇಶ್, ಮಹೇಶ್ ಗೌಳಿ ಸೇರಿದಂತೆ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದಬೀಬಿ ಝುಲೇಖಾ, ಬಂದಗಿ ಬಸವರಾಜ್ ಶೇಟ್, ಷಣ್ಮುಖ, ಗೀತಾ ಚಂದ್ರಶೇಖರ್, ಪಪಂ ಮುಖ್ಯಾಧಿಕಾರಿ ಬಾಲಚಂದ್ರ, ಕಿರಿಯ ಅಭಿಯಂತರೆ ಶೆಲ್ಜಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





