ವಸತಿ ನಿಲಯ, ಆಸ್ಪತ್ರೆ, ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ: ಮುನೀಶ್ ಮೌದ್ಗಿಲ್
ಕಾರವಾರ, ಆ.31: ಆಡಳಿತಕ್ಕೆ ಚುರುಕು ಮೂಡಿಸಲು ಅಧಿಕಾರಿಗಳ ತಂಡವನ್ನು ರಚಿಸಿ ವಸತಿ ನಿಲಯ, ಆಸ್ಪತ್ರೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಹಾಗೂ ವಿವಿಧ ಇಲಾಖಾ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಸರಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿರಂತರ ಮೇಲುಸ್ತುವಾರಿ ಅಗತ್ಯವಿದೆ. ಇದಕ್ಕಾಗಿ ಎಲ್ಲ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ನಿರಂತರ ತಪಾಸಣಾ ಕಾರ್ಯವನ್ನು ಕೈಗೊಳ್ಳಬೇಕು. ಇದರಿಂದ ವ್ಯವಸ್ಥೆ ಸುಧಾರಿಸಿ ಉತ್ತಮ ಆಡಳಿತ ನೀಡಲು ಸಾಧ್ಯವಿದೆ. ತಪ್ಪಿತಸ್ಥರ ಮೇಲೆ ಶಿಸ್ತುಕ್ರಮ ಜರಗಿಸುವುದು ಮಾತ್ರವಲ್ಲದೆ, ವ್ಯವಸ್ಥೆಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದಾಗಿದೆ. ಜಿಲ್ಲೆಯಲ್ಲಿ ಗೇರು ಕೃಷಿ ಪ್ರದೇಶ ವಿಸ್ತರಣೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಪ್ರಗತಿ ಸಮಾಧಾನಕರವಾಗಿಲ್ಲ ಎಂದು ಅವರು ತಿಳಿಸಿದರು.
ವಸತಿ ಯೋಜನೆ ಅನುಷ್ಠಾನ: ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಬೇಕು. ನಗರ ಪ್ರದೇಶದಲ್ಲಿ ವಸತಿಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸಬೇಕು. ದಾಖಲೆಗಳ ಒದಗಿಸುವಿಕೆ, ಅನುಷ್ಠಾನದಲ್ಲಿದ್ದ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯ ಅಧಿಕಾರಿ ಗುತ್ತಿ ಜಂಬುನಾಥ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪೌಝಿಯಾ ತರನ್ನಮ್ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.







