ಕಾರವಾರ: ನೂತನ ಮೀನು ಮಾರುಕಟ್ಟೆ ನಿರ್ಮಾಣ ಪ್ರಸ್ತಾಪ ಚರ್ಚೆ

ಕಾರವಾರ, ಆ.31: ನಗರದ ಕೆಇಬಿ ಬಳಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣದ ಪ್ರಸ್ತಾಪದ ಬಗ್ಗೆ ಅಪರ ಜಿಲ್ಲಾಧಿಕಾರಿ ಮೀನುಗಾರ ಮುಖಂಡರ ಜತೆಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ನಗರದ ಕೆಇಬಿಯ ಕೋಣೆನಾಲಾ ಬಳಿ ಸುಮಾರು 20 ಗುಂಟೆ ಜಮೀನಿನಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೂರು ಕೋಟಿ ರೂ. ಅನುದಾನ ನೀಡಲು ಸಿದ್ದವಾಗಿದೆ. ಈ ಬಗ್ಗೆ ಎಲ್ಲ ಮೀನುಗಾರರ ಒಮ್ಮತದ ಒಪ್ಪಿಗೆ ಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ ಮಾತನಾಡಿ, ಕೋಣೆನಾಲಾದ ಬಳಿ ಮೀನು ಮಾರುಕಟ್ಟೆ ನಿರ್ಮಾಣ ಮಾಡಿದರೆ ಮೀನುಗಾರ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಹಿಂದೆ ನಗರದಲ್ಲೇ ಇದ್ದ ಮೀನು ಮಾರುಕಟ್ಟೆ ದುಸ್ಥಿತಿಯಲ್ಲಿದ್ದ ಕಾರಣ ಜಿಲ್ಲಾಡಳಿತ ಸಾರ್ವಜನಿಕರ ಹಾಗೂ ಮೀನುಗಾರರ ರಕ್ಷಣೆಯ ದೃಷ್ಟಿಯಿಂದ ತೆರವುಗೊಳಿಸಿತ್ತು. ಬಳಿಕ ಹಿಂದಿನ ಜಿಲ್ಲಾಧಿಕಾರಿ ಅದೇ ಸ್ಥಳದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್ ಮಾತನಾಡಿ, ಮೀನುಗಾರ ಮಹಿಳೆಯರಿಗೆ ಹಿಂದೆ ಇದ್ದ ಸ್ಥಳದಲ್ಲೇ ಮೀನು ಮಾರುಕಟ್ಟೆ ಬೇಕು ಎನ್ನುವ ಬೇಡಿಕೆ ಇದೆ. ಕಳೆದ ಸಾಕಷ್ಟು ವರ್ಷಗಳಿಂದ ನಗದ ಮಧ್ಯದಲ್ಲೇ ಮೀನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮೀನು ಮಾರುಕಟ್ಟೆ ಸ್ಥಿತಿ ಸರಿಯಾಗಿಲ್ಲದ ಕಾರಣ ತೆರವುಗೊಳಿಸಿದ್ದರಿಂದ ಎಲ್ಲ ಮಹಿಳೆಯರು ರಾಷ್ಟ್ರೀಯ ಹೆದ್ದಾರಿ ಬಳಿಯ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬೇಕಾಗಿದೆ. ಜಿಲ್ಲಾಡಳಿತ ನೀಡಿದ ಭರವಸೆಯಂತೆ ಹಿಂದಿನ ಸ್ಥಳದಲ್ಲೇ ಮೀನು ಮಾರುಕಟ್ಟೆ ನಿರ್ಮಿಸಬೇಕು ಎಂದು ಕೋರಿದರು.
ನಗರದ ಮಧ್ಯದಲ್ಲಿ ಕೇವಲ ಆರುವರೆ ಗುಂಟೆ ಜಮೀನಿದೆ ಹೆಚ್ಚಿನ ಮೀನುಗಾರ ಮಹಿಳೆಯರು ಆ ಸ್ಥಳದಲ್ಲಿ ಮೀನು ಮಾರಾಟ ಮಾಡಲು ತೊಂದರೆಯಾಗಬಹುದು. ಸ್ಥಳವಕಾಶದ ಕೊರತೆ ಇರುವುದರಿಂದ ಸ್ವಚ್ಛತೆಗೂ ತೊಂದರೆಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೀನುಗಾರ ಮಹಿಳೆಯರು ಹಾಗೂ ಮುಖಂಡರು, ನಗರದ ಮಧ್ಯದಲ್ಲೇ ಮೀನು ಮಾರುಕಟ್ಟೆ ನಿರ್ಮಿಸಿಕೊಟ್ಟರೆ ತಮ್ಮ ಸಂಘದ ವತಿಯಿಂದ ್ಟ ತ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತೇವೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಮ್ಮದೇ ಜನರನ್ನು ಸ್ವಚ್ಛತೆಗೆ ನೇಮಕ ಮಾಡಿಕೊಳ್ಳುತ್ತೇವೆ ಎಂದರು. ಬಳಿಕ ಅಪರ ಜಿಲ್ಲಾಧಿಕಾರಿ ಮೀನುಗಾರರ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗುವುದು ಎಂದರು.
ಶಾಶ್ವತ ಹಾಗೂ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 3 ಕೋಟಿ ರೂ. ಅನುದಾನದಲ್ಲಿ ಮೀನು ಮಾರುಕಟ್ಟೆ ಸ್ಥಳ ಗುರುತು ಆದ ಮೇಲೆ ನಿರ್ಮಾಣವಾಗಲಿದೆ. ಕೆಇಬಿ ಬಳಿಯ ಕೋಣೆನಾಲಾದ ಬಳಿ 20 ಗುಂಟೆ ಜಮೀನನ್ನು ಗುರುತಿಸಿ ಮೀನುಗಾರರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮೀನುಗಾರರು ಹಿಂದೆ ಇದ್ದ ಸ್ಥಳದಲ್ಲೇ ಮೀನು ಮಾರುಕಟ್ಟೆ ನಿರ್ಮಾಣವಾಗಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮೀನುಗಾರ ಮುಖಂಡರು ಸೇರಿ ಚರ್ಚೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು.
- ಎಚ್. ಪ್ರಸನ್ನ, ಅಪರ ಜಿಲ್ಲಾಧಿಕಾರಿ







