ವರ್ಷಗಳು ಕಳೆದರೂ ಪ್ರಾರಂಭವಾಗದ ಬಸ್ ನಿಲ್ದಾಣ ಕಾಮಗಾರಿ
ಅನೇಕ ಬಾರಿ ಶಂಕುಸ್ಥಾಪನೆ ಮಾಡಿರುವ ರಾಜಕಾರಣಿಗಳು

ಮಡಿಕೇರಿ ಆ.31: ಗುದ್ದಲಿ ಹಿಡಿದು ಶಂಕುಸ್ಥಾಪನೆ ಮಾಡುವ ನಾಯಕರನ್ನು ಮಡಿಕೇರಿ ಜನಕ್ಕೆ ನೋಡಿ ನೋಡಿ ಸಾಕಾಗಿದೆ. ಕಳೆದ ಹತ್ತು ವರ್ಷಗಳಿಂದ ನೂತನ ಖಾಸಗಿ ಬಸ್ ನಿಲ್ದಾಣ ಎನ್ನುವ ತುಪ್ಪವನ್ನು ಜನರ ಮೂಗಿಗೆ ಸವರುತ್ತಲೇ ಬರುತ್ತಿರುವ ರಾಜಕಾರಣಿಗಳು ತಮ್ಮ ಅಸಹಾಯಕತೆಯನ್ನು ಪ್ರತ್ಯಕ್ಷವಾಗಿಯೇ ಪ್ರಮಾಣೀಕರಿಸುತ್ತಿದ್ದಾರೆ. ಕೇವಲ ರಾಜಕೀಯ ಬೇಳೆ ಬೇಯಿಸಿ ಕೊಳ್ಳುವುದಕ್ಕಾಗಿಯೇ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿಟ್ಟ್ಟಿರುವ ಕೆಲವು ರಾಜಕಾರಣಿಗಳಿಂದಾಗಿ ಇಂದು ಮಡಿಕೇರಿ ಈ ದುಸ್ಥಿತಿಗೆ ಬಂದು ತಲುಪಿದೆ ಎನ್ನುವ ಆರೋಪ ಕೇಳಿ ಬಂದಿದೆ. ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲದಿಂದಲೇ ಅನೇಕರು ಶಂಕುಸ್ಥಾಪನೆ ಮಾಡಿಕೊಂಡೇ ಬಂದಿದ್ದಾರೆ. ಒಬ್ಬ ಶಂಕುಸ್ಥಾಪನೆ ಮಾಡಿದರೆ ಆ ಯೋಜನೆಗೊಂದು ಗೌರವ ಎನ್ನುವುದಿರುತ್ತದೆ. ಆದರೆ ಕೊಡಗು ಜಿಲ್ಲೆಗೆ ಬಂದವರು, ಹೋದ ವರು ಎಲ್ಲರೂ ಗುದ್ದಲಿ ಹಿಡಿದು ಅಗೆಯುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸುವ ಉತ್ಸಾಹ ಮಾತ್ರ ಯಾರಿಗೂ ಇದ್ದಂತ್ತಿಲ್ಲ. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ಈಗಾಗಲೇ ಅನೇಕ ಬಾರಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಸರಣಿ ಶಂಕುಸ್ಥಾಪನೆ ಬದಲಿಗೆ ಶೀಘ್ರ ಕಾಮಾಗಾರಿಯನ್ನು ಆರಂಭಿಸಬೇಕೆನ್ನುವುದು ಮಡಿಕೇರಿ ಜನರ ಒತ್ತಾಯವಾಗಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್ ಅವರು, ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ನಗರಸಭೆ ಜಿಲ್ಲಾ ಉಸ್ತುವಾರಿ ಸಚಿರ ಮೂಲಕ ಕಾಮಗಾರಿಯನ್ನು ಆರಂಭಿಸಲು ಮುಂದಾಗಿರುವುದು ನಗರದ ಜನತೆಗೆ ತೃಪ್ತಿ ತಂದಿದೆ.
ಆದರೆ, ಶಂಕುಸ್ಥಾಪನೆಯ ಪ್ರಹಸನಗಳು ಹಿಂದೆಯೂ ಅನೇಕ ಬಾರಿ ನಡೆದಿದ್ದು, ಈ ಬಾರಿಯೂ ಕಾಮಗಾರಿ ಆರಂಭಗೊಳ್ಳುವ ವಿಶ್ವಾಸ ಜನರಲ್ಲಿ ಇಲ್ಲ. ಹೈಟೆಕ್ ಮಾರುಕಟ್ಟೆಯಂತೆ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯೂ ವಿಳಂಬವಾಗಬಾರದು ಎನ್ನುವುದು ಜನರ ಅಪೇಕ್ಷೆಯಾಗಿದೆ. ಪ್ರಯಾಣಿಕರಿಗೆ ಕುಡಿಯುವ ನೀರು, ಸ್ವಚ್ಛ ಮ್ತು ಸುಸಜ್ಜಿತವಾದ ಶೌಚಾಲಯ, ಅಂಗಡಿ ಮಳಿಗೆಗಳು ಸೇರಿದಂತೆ ಮೂಲಭೂತ ಸೌಲಭ್ಯಗಳು ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕೆನ್ನುವ ಒತ್ತಾಯವಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡದೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿರುವುದು ಅತ್ಯಗತ್ಯವಾಗಿದೆ.
ಇದೀಗ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಸುಮಾರು 5 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಎಲ್ಲ ಹೊರೆಗಳು ಸಾರ್ವಜನಿಕರ ಮೇಲೆ ಬೀಳುತ್ತಿದ್ದು, ತೆರಿಗೆ ರೂಪದ ಹಣವನ್ನು ಪೋಲು ಮಾಡಲಾಗುತ್ತಿದೆ. ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಮಡಿಕೇರಿ ನಗರದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.







