ಪ್ರೇಮ ನಿರಾಕರಣೆ: ಚರ್ಚಿನಲ್ಲಿ ಪ್ರಾರ್ಥಿಸುತ್ತಿದ್ದ ಅಧ್ಯಾಪಕಿಯನ್ನು ಕಡಿದು ಕೊಲೆಗೈದ ಭಗ್ನ ಪ್ರೇಮಿ

ಚೆನ್ನೈ,ಸೆ.1: ಪ್ರೇಮ ನಿವೇದನೆಯನ್ನು ತಳ್ಳಿಹಾಕಿದ್ದ ಅಧ್ಯಾಪಕಿಯನ್ನು ಚರ್ಚ್‌ನಲ್ಲಿ ಪ್ರಾರ್ಥಿಸುತ್ತಿದ್ದಾಗ ಯುವಕನೊಬ್ಬ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ತೂತ್ತುಕುಡಿಯಿಂದ ವರದಿಯಾಗಿದೆ. ತೂತ್ತುಕುಡಿಯ ಶಾಂತಿ ರೋಡ್ ಸೈಂಟ್ ಪೀಟರ್ಸ್ ಚರ್ಚ್‌ನಲ್ಲಿ ಘಟನೆ ನಡೆದಿದ್ದು, ಚರ್ಚ್‌ನ ಆಡಳಿತದ ಶಾಲೆಯಲ್ಲಿ ಅಧ್ಯಾಪಕಿಯಾದ ಎನ್. ಫ್ರಾನ್ಸಿನಾ(24) ಭಗ್ನಪ್ರೇಮಿಯ ಕರಾಳಕೃತ್ಯಕ್ಕೆ ಬಲಿಯಾದ ದುರದೃಷ್ಟವಂತೆ ಎಂದು ವರದಿ ತಿಳಿಸಿದೆ.
ಅಧ್ಯಾಪಕಿಯನ್ನು ಕೊಲೆಗೈದ ಬಳಿಕ ಆರೋಪಿ ಜೆ.ಕೀಗನ್ ಜೋಸ್ ಗೋಮ್ಸ್(27) ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ತಾನೂ ಸತ್ತಿದ್ದಾನೆ. ಸೆಪ್ಟಂಬರ್ ಮೊದಲವಾರದಲ್ಲಿಫ್ರಾನ್ಸಿನರ ವಿವಾಹ ಬೇರೊಬ್ಬರೊಂದಿಗೆ ನಡೆಯಲಿತ್ತು.
ಮದುವೆಯ ನಿಮಿತ್ತ ಶಾಲೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ಆಧ್ಯಾಪಕಿ ಬುಧವಾರ ಶಾಲೆಯನ್ನು ತೊರೆಯಲಿದ್ದರು. ನಿನ್ನೆ ಬೆಳಗ್ಗೆ 8:30ಕ್ಕೆ ಚರ್ಚ್‌ಗೆ ಬಂದು ಪ್ರಾರ್ಥನೆಯಲ್ಲಿ ನಿರತರಾಗಿದ್ದ ಫ್ರಾನ್ಸಿನಾರನ್ನು ಕೀಗನ್ ಮಚ್ಚಿನಿಂದ ಕಡಿದಿದ್ದಾನೆ. ಬೊಬ್ಬೆಕೇಳಿ ಓಡಿ ಬಂದವರು ಅವರನ್ನು ತೂತ್ತುಕುಡಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರೂ ಮಧ್ಯಾಹ್ನವಾಗುವಷ್ಟರಲ್ಲಿ ಫ್ರಾನ್ಸಿನಾ ಇಹಲೋಕ ತ್ಯಜಿಸಿದರೆಂದು ವರದಿ ತಿಳಿಸಿದೆ.
ಚರ್ಚ್‌ನ ಎರಡು ಸಿಸಿ ಕ್ಯಾಮರಾಗಳಲ್ಲಿ ದಾಖಲಾದ ದೃಶ್ಯದ ಆಧಾರದಲ್ಲಿ ತೂತ್ತುಕುಡಿ ಪೊಲೀಸರು ಕೊಲೆಆರೋಪಿಯನ್ನು ಹುಡುಕುತ್ತಾ ಆತನ ಮಾರಕ್ಕುಡಿ ಸ್ಟ್ರೀಟ್‌ನಲ್ಲಿರುವ ಮನೆಗೆ ಹೋದಾಗ ನೇಣುಹಾಕಿ ಮೃತನಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಕಳೆದ ಆರುತಿಂಗಳಿನಿಂದ ಪ್ರೇಮನಿವೇದನೆಯೊಂದಿಗೆ ಈತ ಫ್ರಾನ್ಸಿನಾರನ್ನು ಹಿಂಬಾಲಿಸುತ್ತಿದ್ದ ಎಂದು ವರದಿಯಾಗಿದೆ.







