ಅಖಿಲೇಶ್ ಸರಕಾರದ ಅನನ್ಯ ಸಾಧನೆ !
ಟೀ, ಸಮೋಸ, ಗುಲಾಬ್ ಜಾಮೂನಿಗೆ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೇ ?

ಲಕ್ನೋ, ಸೆ.1: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಬೇರೆ ವಿಚಾರಗಳು ಬದಿಗಿರಲಿ, ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರಕಾರ ಒಂದು ಅನನ್ಯ ಸಾಧನೆಯನ್ನಂತೂ ಮಾಡಿದೆ. ಸಚಿವರುಗಳು ತಮ್ಮ ಅತಿಥಿಗಳಿಗಾಗಿ ಟೀ, ಸಮೋಸ, ಗುಲಾಬ್ ಜಾಮೂನ್ ತರಿಸುತ್ತಿದ್ದರೆ, ಕಳೆದ ನಾಲ್ಕು ವರ್ಷಗಳಲ್ಲಿ ಇದಕ್ಕಾಗಿ ಅವರು ಮಾಡಿದ ಖರ್ಚು ಬರೋಬ್ಬರಿ 9 ಕೋಟಿ ರೂಪಾಯಿಗಳು.
ನಿಖರವಾಗಿ ಹೇಳಬೇಕೆಂದರೆ ಅಖಿಲೇಶ್ ಸರಕಾರ ಅಧಿಕಾರ ವಹಿಸಿಕೊಂಡ ಮಾರ್ಚ್ 15, 2012 ರಿಂದ ಮಾರ್ಚ್ 15, 2016 ರ ತನಕ ಟೀ ಹಾಗೂ ತಿಂಡಿಗಾಗಿ 8,78,12,474 ರೂ. ಖರ್ಚು ಮಾಡಲಾಗಿದೆ. ಈ ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೇ ಬುಧವಾರ ಅಂತ್ಯಗೊಂಡ ರಾಜ್ಯ ವಿಧಾನ ಸಭೆಯ ಮಳೆಗಾಲದ ಅಧಿವೇಶನ ಸಂದರ್ಭ ಹೇಳಿದರು.
ಈ ನಿಟ್ಟಿನಲ್ಲಿ ಅತೀ ಹೆಚ್ಚು ಖರ್ಚು ಮಾಡಿದವರ ಪಟ್ಟಿಯಲ್ಲಿ ಮೊದಲ ಸ್ಥಾನಸಮಾಜ ಕಲ್ಯಾಣ ಸಚಿವೆ ಅರುಣ್ ಕುಮಾರ್ ಕೋರಿ ( 22,93,800 ರೂ.) ಪಡೆದಿದ್ದರೆ, ನಗರಾಭಿವೃದ್ಧಿ ಸಚಿವ ಮುಹಮ್ಮದ್ ಆಝಮ್ ಖಾನ್ ಅವರು 22,86,620 ರೂ. ಖರ್ಚು ಮಾಡಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಇತರ ಸಚಿವರಲ್ಲಿ ಪ್ರಾಥಮಿಕ ಶಿಕ್ಷಣ, ಮಕ್ಕಳಾಭಿವೃದ್ಧಿ ಹಾಗೂ ಪೌಷ್ಠಿಕಾಂಶ ಸಚಿವ ಕೈಲಾಶ್ ಚೌರಾಸಿಯಾ ಮೂರನೆ ಸ್ಥಾನದಲ್ಲಿದ್ದುಕೊಂಡು ತಿಂಡಿ ಪಾನೀಯಗಳಿಗೆ 22,85,900 ರೂ. ಖರ್ಚು ಮಾಡಿದ್ದರೆ, ಲೋಕೋಪಯೋಗಿ ಸಚಿವ ಶಿವಪಾಲ್ ಯಾದವ್ ಈ ನಿಟ್ಟಿನಲ್ಲಿ ಏನೂ ಖರ್ಚು ಮಾಡಿಲ್ಲವೆಂದು ದಾಖಲೆಗಳು ತೋರಿಸುತ್ತವೆ. 21 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿದ ಇತರ ಸಚಿವರೆಂದರೆ ಕ್ರೀಡಾ ಸಚಿವ ರಾಮ್ ಕರಣ್ ಆರ್ಯ ಹಾಗೂ ಭೂ ಅಭಿವೃದ್ಧಿ ಸಚಿವ ಜಗದೀಶ್ ಸೋಂಕರ್.
ನಿಯಮಗಳ ಪ್ರಕಾರ ಸಚಿವರೊಬ್ಬರು ದಿನವೊಂದಕ್ಕೆ ತಮ್ಮ ಕರ್ತವ್ಯದ ಅವಧಿಯಲ್ಲಿ ಅತಿಥಿಗಳ ಚಹಾ, ತಿಂಡಿಗಾಗಿ ರಾಜ್ಯದಲ್ಲಿ 2,500 ರೂ. ಹಾಗೂ ಹೊರ ರಾಜ್ಯಗಳಲ್ಲಿ 3,000 ರೂ. ಖರ್ಚು ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.







