‘ಕನಸುಗಳ ಸಾಕ್ಷಾತ್ಕಾರದ ಹಾದಿಯಲ್ಲಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಐವನ್ ಡಿಸೋಜ ವಿಧಾನ ಪರಿಷತ್ ಸದಸ್ಯರಾಗಿ 2 ವರ್ಷ ಪೂರೈಕೆ

ಮಂಗಳೂರು, ಸೆ.1: ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ವಿಧಾನಪರಿಷತ್ ಸದಸ್ಯರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಕನಸುಗಳ ಸಾಕ್ಷಾತ್ಕಾರದ ಹಾದಿಯಲ್ಲಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೆಪ್ಪು ಸಂತ ಅಂಥೊನಿಯವರ ಆಶ್ರಮದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐವನ್ ಡಿಸೋಜ ಬಡವರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ ಎಂದರು. ರಾಜಕಾರಣಿಗಳು ಮಾಡುವ ಉತ್ತಮ ಕಾರ್ಯಗಳು ಪುಸ್ತಕ ರೂಪದಲ್ಲಿ ಹೊರಬರಬೇಕು. ಆಗ ಜನರಿಗೆ ರಾಜಕಾರಣಿಗಳ ಉತ್ತಮ ಕಾರ್ಯಗಳ ಬಗ್ಗೆ ತಿಳಿಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನಸುಗಳ ಸಾಕ್ಷಾತ್ಕಾರದ ಹಾದಿಯಲ್ಲಿ ಪುಸ್ತಕವನ್ನು ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಬಿ.ಎ.ವಿವೇಕ ರೈ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ರಾಜಕಾರಣಿಗಳು ಕನಸು ಕಾಣದೆ ಇರುವವರಾಗಿರುತ್ತಾರೆ. ಮೆಗಾ ಪ್ರಾಜೆಕ್ಟ್‌ಗಳಿಂದ ಪ್ರಚಾರ ಪಡೆಯುತ್ತಾರೆ. ಐವನ್ ಡಿಸೋಜ ಇದಕ್ಕೆ ವಿರುದ್ಧವಾಗಿದ್ದಾರೆ. ಮತದ ಹಿಂದೆ ಹೋಗದೆ, ಎಲ್ಲರ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನು ಹೊಂದಿದ್ದಾರೆ. ಗಾಂಧಿ, ನೆಹರೂ ಹಾದಿಯ ಕಿಡಿಯನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3.10 ಕೋಟಿ ಪರಿಹಾರ ವನ್ನು ಬಡವರಿಗೆ ನೀಡಿದ ಸಂತೃಪ್ತಿ ನನಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಹರಿನಾಥ್ ಎಂ., ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಐವನ್ ಡಿಸೋಜರ ಧರ್ಮಪತ್ನಿ ಡಾ.ಕವಿತಾ, ಸಂತ ಅಂತೋನಿ ಆಶ್ರಮದ ಡೈರೆಕ್ಟರ್ ಫಾ.ಓನಿಲ್, ನ್ಯಾಯವಾದಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.







