ಕಾಸರಗೋಡು: ಪೆರಡಾಲ ದೇವಸ್ಥಾನದಲ್ಲಿ ಕಳವುಗೈದ ಆರೋಪಿ ಸೆರೆ

ಕಾಸರಗೋಡು, ಸೆ.1: ಬದಿಯಡ್ಕ ಪೆರಡಾಲದ ಉದನೇಶ್ವರ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿಯಿಂದ 38 ಸಾವಿರ ರೂ.ನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತನನ್ನು ಪೆರಡಾಲ ಶಾಂತಿಪಳ್ಳದ ವೆಂಕಪ್ಪ ನಾಯ್ಕ್ (27) ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿಯನ್ನೇ ಇರಿದು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದು, ನಾಲ್ಕು ವರ್ಷ ಜೈಲು ವಾಸ ಅನುಭವಿಸಿ ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ.
ಆಗಸ್ಟ್ 28 ರಂದು ರಾತ್ರಿ ಪೆರಡಾಲ ದೇವಸ್ಥಾನಕ್ಕೆ ನುಗ್ಗಿ ಹುಂಡಿ ಹಣ ಕಳವು ಮಾಡಿದ್ದ. ಆರು ಹುಂಡಿಗಳಿಂದ ಸುಮಾರು 60 ಸಾವಿರ ರೂ. ಕಳವುಗೈದು ಹುಂಡಿಯನ್ನು ಸಮೀಪದ ಹಿತ್ತಲಿನಲ್ಲಿ ಎಸೆದು ಪರಾರಿಯಾಗಿದ್ದ.ಈ ಬಗ್ಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬೇಕಲ ಕೋಟೆ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು 2011ರಲ್ಲಿ ಮಧ್ಯಾಹ್ನ ಪಾನಮತ್ತನಾಗಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕಾಗಿ ತಾಯಿ ಕಮಲಾರನ್ನು ಕೊಲೆಗೈದಿದ್ದನು. ಶಿಕ್ಷೆ ಅನುಭವಿಸುತ್ತಿದ್ದ ಈತನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆ ಮಾಡಿ ತೀರ್ಪು ನೀಡಿತ್ತು. ಬಳಿಕ ತಮಿಳುಡನಾಡಿನ ತಿರುಚ್ಚಿರಾಪಳ್ಳಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದನು. ಆಗಸ್ಟ್ 26 ರಂದು ಊರಿಗೆ ಬಂದಿದ್ದು, ಬಸ್ಸು ನಿಲ್ದಾಣದಲ್ಲಿ ಈತ ಮಲಗಿರುವುದನ್ನು ಸ್ಥಳೀಯರು ಗಮನಿಸಿದ್ದರು. ಈ ಸಂದರ್ಭ ಆತ ಉದ್ದ ತಲೆಗೂದಲು ಹೊಂದಿದ್ದ. ಆಗಸ್ಟ್ 28 ರಂದು ರಾತ್ರಿ ದೇವಸ್ಥಾನದಲ್ಲಿ ಕಳವುಗೈದ ಬಳಿಕ ತಲೆಬೋಳಿಸಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.







