ಹಬ್ಬಗಳ ಆಚರಣೆ: ಮುನ್ನೆಚ್ಚರಿಕಾ ಕ್ರಮಕ್ಕೆ ಒತ್ತಾಯ

ಮಂಗಳೂರು, ಸೆ.1: ಮುಂದಿನ ದಿನಗಳಲ್ಲಿ ವಿವಿಧ ಧರ್ಮಗಳ ಹಬ್ಬ ಹರಿದಿನಗಳಲ್ಲಿ ಅಹಿತಕರ ಘಟೆ ನಡೆಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಮಾನವ್ ಸಮಾನತಾ ಮಂಚ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಮುಂಬರುವ ಗಣೇಶ ಚತುರ್ಥಿ, ತೆನೆ ಹಬ್ಬ ಮತ್ತು ಬಕ್ರೀದ್ ಹಬ್ಬಗಳು ಒಟ್ಟೊಟ್ಟಾಗಿ ಆಚರಣೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳು ಜಿಲ್ಲೆಯಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷ ಉಂಟು ಮಾಡುವ ಸಂಭವವನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪ್ರತಿ ಧರ್ಮದ ಹಬ್ಬದ ಆಚರಣೆಯನ್ನು ಕಾನೂನಿನ ಚೌಕಟ್ಟಿನೊಳಗೆ ನಿರ್ವಿಘ್ನವಾಗಿ ಆಚರಿಸಲು ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.
ನಿಯೋಗದಲ್ಲಿ ಮಂಚ್‌ನ ಅಧ್ಯಕ್ಷ ಅಲಿ ಹಸನ್, ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೊ, ಗೌರವಾಧ್ಯಕ್ಷ ವಸಂತ್ ಟೈಲರ್, ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಮುಖಂಡರಾದ ವಿಷ್ಣು ಮೂರ್ತಿ, ಸತ್ತಾರ್ ಉಪಸ್ಥಿತರಿದ್ದರು.





