ಕೋಮು ಧ್ರುವೀಕರಣ ತಡೆಗೆ ಮಧ್ಯ ಪ್ರವೇಶಿಸಲು ರಾಷ್ಟ್ರಪತಿಗೆ ಮನವಿ

ಸೊರಬ, ಸೆ.1: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಬೇಕು ಎಂದು ಶಾಂತಿ ಮತ್ತು ಮಾನವೀಯತೆ ಅಭಿಯಾನದ ತಾಲೂಕು ಸ್ವಾಗತ ಸಮಿತಿ ವತಿಯಿಂದ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಸ್ವಾಗತ ಸಮಿತಿಯ ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣ, ಸಮಾಜದ ಒಡಕು ಹಾಗೂ ಜಾತಿ ಮತ್ತು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣ ದ್ವೇಷ ಮತ್ತು ಕೋಮು ಉದ್ವಿಗ್ನತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇಶದ ಸ್ಥಿತಿಯು ತುಂಬಾ ಚಿಂತಾಜನಕ ಮತ್ತು ಕಳವಳಕಾರಿಯಾಗಿದೆ. ಕೆಲವೊಂದು ಸಾಮಾಜಿಕ ಅತಿಕ್ರಮಣಗಳು, ಆರೋಪ ಹೊರಿಸಿ ಉದ್ವಿಗ್ನ ಗುಂಪುಗಳ ಮೂಲಕ ಥಳಿತ, ಬುದ್ದಿಜೀವಿಗಳ ಹತ್ಯೆ, ಕೆಲವೊಂದು ವರ್ಗ ಮತ್ತು ಜಾತಿಗಳ ಮಹಿಳೆಯರನ್ನು ವಿವಸ್ತ್ರಗೊಳಿಸುವ, ಜನಪ್ರತಿನಿಧಿಗಳಾಗಿ ಆಯ್ಕೆಯಾದ ಲೋಕ ಸಭಾ ಸದಸ್ಯರು ಹಾಗೂ ಸಚಿವರು ಕೋಮುಗಳ ವಿರುದ್ಧ ನಿಂದನಾತ್ಮಕ ಮತ್ತು ಬೆದರಿಕೆಯ ಭಾಷೆ ಹಾಗೂ ದಲಿತ ವರ್ಗದ ನಾಯಕರ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ವೌನವಹಿಸಿರುವುದು ಇಂತಹ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ನಕಲಿ ಗೋರಕ್ಷಕರಿಂದ ನಡೆಯುತ್ತಿರುವ ಅಮಾನವೀಯ ಘಟನೆಗಳ ಕುರಿತು ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದರೆ ಸಾಲದು, ಅಂತಹ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಅಂತರ್‌ಧರ್ಮೀಯ ಸಂಪರ್ಕ ಮತ್ತು ಸೌಹಾರ್ದವನ್ನು ಬಲಪಡಿಸುವ ನಿಟ್ಟಿನಲ್ಲಿ ಶಾಂತಿ ಮತ್ತು ಮಾನವೀಯತೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಂವಿಧಾನಿಕ ವೌಲ್ಯಗಳ ರಕ್ಷಣೆಯನ್ನು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಒತ್ತಾಯಿಸಿದರು. ಕೋಮು ಗಲಭೆಗಳನ್ನು ತಡೆಯುವ ಮಸೂದೆಯನ್ನು ಜಾರಿಗೆ ತರಬೇಕು. ಕೋಮು ಗಲಭೆೆಗಳ ಎಲ್ಲ ಸಂತ್ರಸ್ತರಿಗೆ ಪರಿಹಾರ ಮತ್ತು ರಕ್ಷಣೆ ಒದಗಿಸಬೇಕು. ಅಂತರ್ಜಾಲದಲ್ಲಿ ಶಾಂತಿ-ಸುವ್ಯಸ್ಥೆಗೆ ಭಂಗ ತರುವಂತೆ ಹಾಗೂ ವಿಷಕಾರಿ ವಿಷಯಗಳನ್ನು ಪ್ರಸಾರವಾಗದಂತೆ ನಿಗಾವಹಿಸುವುದು, ತಪ್ಪಿತಸ್ಥರ ವಿರುದ್ಧ ಮಾಹಿತಿ ತಂತ್ರಜ್ಞ್ಞಾನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಅಭಿಯಾನದ ತಾಲೂಕು ಸಂಚಾಲಕ ಎಂ. ಬಶೀರ್ ಅಹ್ಮದ್, ಸಹ ಸಂಚಾಲಕ ಆರ್.ಅಬ್ದುಲ್ ರಶೀದ್, ಮುಹಮ್ಮದ್ ಶಾಬುದ್ದೀನ್, ಫಾ. ವಿಕ್ಟರ್ ಫಾಯ್ಸಾ, ರೈತ ಸಂಘದ ಅಧ್ಯಕ್ಷ ಉಮೇಶ್ ಪಾಟೀಲ್, ಪ್ರಮುಖರಾದ ಹನುಮಂತಪ್ಪಯಲಸಿ, ಕೆ. ಮಂಜುನಾಥ್ ಹಳೇಸೊರಬ, ಎಂ.ಎನ್. ಮಧುಸೂದನ, ಝೈನುಲ್ಲಾಬಿದೀನ್, ಎನ್. ನೂರ್‌ಅಹ್ಮದ್, ನೆಮ್ಮದಿ ಸುಬ್ಬು, ಬುಳ್ಳಿ ವಿನಾಯಕಪ್ಪ, ಜಯಶೀಲಾ ಎಚ್, ಚಂದ್ರಪ್ಪ, ಇ.ಎಚ್. ಮಂಜುನಾಥ್, ಮಂಜುನಾಥ್ ಬಾಂಬೋರೆ, ಮುಹಮ್ಮದ್ ಇನಾಯತ್‌ವುಲ್ಲಾ, ಪಿ.ಮುಹಮ್ಮದ್ ಇಮ್ತಿಯಾಝ್ ಮತ್ತಿತರರು ಹಾಜರಿದ್ದ್ದರು.







