ಕಾನೂನು ಪರಿಪಾಲನೆಯೇ ನಿಜವಾದ ದೇಶಭಕ್ತಿ: ಕೃಷ್ಣರಾಜು
ಮಿಲನ-2016 ಕಾರ್ಯಕ್ರಮ

ಚಿಕ್ಕಮಗಳೂರು, ಸೆ.1: ಕಾನೂನಿಗೆ ಗೌರವ ನೀಡಿದರೆ ದೇಶಕ್ಕೆ ಗೌರವ ನೀಡಿದಂತಾಗುವುದು ಎಂದು ವೃತ್ತ ಪೊಲೀಸ್‌ನಿರೀಕ್ಷಕ ಕೃಷ್ಣರಾಜು ಅರಸ್ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸಯನ್ಸ್ ನಗರದ ಲಯನ್ಸ್ ಸೇವಾಭವನದಲ್ಲಿ ಆಯೋಜಿಸಿದ್ದ ಮಿಲನ-2016 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಪರಿಪಾಲನೆಯೇ ನಿಜವಾದ ದೇಶಭಕ್ತಿ ಎಂದರು.
ವಿದ್ಯಾರ್ಥಿಗಳು ಹಾಗೂ ಯುವಜನರು ಸಮಾಜದ ಸಾಸ್ಥಕಾಪಾಡಲು ಆಸಕ್ತಿ ವಹಿಸಬೇಕು. ಕಲಿಕೆ ಮೊದಲ ಆದ್ಯತೆಯಾಗಬೇಕು. ಮೊಬೈಲ್, ಮೋಟಾರ್‌ಸೈಕಲ್ ಮುಂತಾದ ಆಕರ್ಷಣೆಗೊಳಗಾಗಿ ವಿದ್ಯಾಭ್ಯಾಸವನ್ನು ಕಡೆಗಣಿಸಬಾರದು. ಸಾಮಾಜಿಕ ತಾಣಗಳನ್ನು ಒಳಿತಿಗೆ ಬಳಕೆ ಮಾಡಿಕೊಳ್ಳಬೇಕು. ಸಮಾಜಘಾತುಕ ಸಂದೇಶಗಳನ್ನು ಹಲವರು ಹರಿಯಬಿಡುತ್ತಿದ್ದು, ಅವುಗಳನ್ನು ರವಾನಿಸುವ ಮಾಡುವ ಅಭ್ಯಾಸ ಒಳ್ಳೆಯದಲ್ಲ. ದೇಶ, ಭಾಷೆ, ಧರ್ಮ ಹಾಗೂ ಸಮಾಜವನ್ನು ಒಡೆಯುವ ಸಂದೇಶಗಳನ್ನು ಮತ್ತೊಬ್ಬರಿಗೆ ರವಾನಿಸುವುದು ಅಪರಾಧವಾಗುತ್ತದೆ. ಬೇಡದ ಸಂದೇಶಗಳನ್ನು ಅಳಿಸುವುದು ಮಾಡುವುದು ಒಳ್ಳೆಯದು ಎಂದರು. ಗಾಂಜಾ, ಅಫೀಮು, ಕೊಕೇನ್, ಅಲ್ಕೋಹಾಲ್, ಎರೈಸರ್-ವೈಟ್ನರ್ ವಾಸನೆ ತೆಗೆದುಕೊಳ್ಳುವ ದುರಭ್ಯಾಸದಿಂದ ದೂರ ಉಳಿಯಬೇಕೆಂದ ಕೃಷ್ಣರಾಜು, ವಾಹನಗಳನ್ನು ಓಡಿಸುವವರು ಕಾನೂನು ಪಾಲಿಸಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಹನಿರ್ದೇಶಕ ರೇವಣ್ಣ ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವೃತ್ತಿಪರಶಿಕ್ಷಣ ಎನಿಸಿಕೊಳ್ಳುವ ಪ್ಯಾರಾಮೆಡಿಕಲ್ ಕೋರ್ಸ್ ಪೂರ್ಣಗೊಳಿಸಿದರೆ ಉದ್ಯೋಗಾವಕಾಶ ಹೆಚ್ಚಾಗಿರುತ್ತದೆ. ಸೇವಾವಧಿಯಲ್ಲಿ ಮಾನವೀಯತೆಯಿಂದ ವರ್ತಿಸಬೇಕೆಂದರು.
ಕಾಲೇಜು ಪ್ರಾಂಶುಪಾಲ ನಿವೃತ್ತ ಡಿಎಚ್‌ಒ ಡಾ. ಭಾಗ್ಯಲಕ್ಷ್ಮಮ್ಮ ಮಾತನಾಡಿ, ಶ್ರದ್ಧೆಯಿಂದ ಕಲಿತು ಉತ್ತಮ ಅಂಕಪಡೆದರೆ ಮಾತ್ರ ಒಳ್ಳೆಯ ಕೆಲಸ ಸಿಗುತ್ತದೆ. ವೃತ್ತಿಪರ ತರಬೇತಿ ಇದಾಗಿದ್ದು, ಪರಿಣಿತಿ-ಚತುರತೆ-ಚಾಕಚಕ್ಯತೆ ಬೇಕು. ನಿಮ್ಮ ವರದಿಯನ್ನು ಆಧರಿಸಿ ವೈದ್ಯರು ಚಿಕಿತ್ಸೆ ನೀಡುವುದರಿಂದ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಎಸ್‌ಐಪಿಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಕುಮಾರ್, ಹೋಲಿಕ್ರಾಸ್ ಪ್ಯಾರಾಮೆಡಿಕಲ್ ಆಡಳಿತಾಧಿಕಾರಿ ಸಿಸ್ಟರ್‌ಜ್ಯೂಡಿ ಮತ್ತು ಡಾ. ಮುರಳೀಧರ್, ಉಪನ್ಯಾಸಕ ಮಧು ಮಾತನಾಡಿದರು. ವಿದ್ಯಾರ್ಥಿನಿಯರಾದ ಜಯಮಾಲ ಮತ್ತು ಸಲ್ಮಾ, ಸಾರ್ವಜನಿಕರ ಪರವಾಗಿ ವಿವೇಕ್ ಮಾತನಾಡಿ ಎಸ್.ಐ.ಪಿ.ಎಸ್. ಸಾಮಾಜಿಕ ಕಾಳಜಿಯನ್ನು ಪ್ರಶಂಸಿಸಿದರು.







