‘ಶಾಂತಿ, ಸಾಮರಸ್ಯ ಎಲ್ಲ ಧರ್ಮಗಳ ಸಾರ’
ಶಾಂತಿ, ಮಾನವೀಯತೆ ಅಭಿಯಾನ
ಸಾಗರ,ಸೆ.1: ಮನುಷ್ಯ ನೆಮ್ಮದಿಯಾಗಿ ಬದುಕ ಬೇಕಾದರೆ ಮಾನವೀಯತೆ ಮತ್ತು ಶಾಂತಿ ಅಗತ್ಯ. ಇವೆರಡು ಇಲ್ಲದೆ ಇದ್ದಲ್ಲಿ ಮನುಷ್ಯನ ಜೊತೆಗೆ ಸಮಾಜ ಸಹ ಅಸ್ಥಿರತೆಯಿಂದ ಕೂಡಿರುತ್ತದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು. ಇಲ್ಲಿನ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿ ಮತ್ತು ಮಾನವೀಯತೆ ಅಭಿಯಾನ ಅಂಗವಾಗಿ ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧುೃವೀಕರಣ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲ ಧರ್ಮವೂ ಶಾಂತಿ ಹಾಗೂ ಸಾಮರಸ್ಯವನ್ನು ಬಯಸುತ್ತದೆ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳುವ, ಧರ್ಮದ ಅರ್ಥವನ್ನು ತಪ್ಪಾಗಿ ಗ್ರಹಿಸುವ ಮನಸ್ಥಿತಿ ಹೆಚ್ಚಾಗುತ್ತಿದೆ. ಇದರಿಂದ ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಶಾಂತಿ ಹಾಗೂ ಮಾನವೀಯತೆ ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಅಗತ್ಯ ಎಂದರು. ಜಮಾಅತೆ ಇಸ್ಲಾಮೀ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಪಿಎಸ್. ಮುಹಮ್ಮದ್ ಶರೀಫ್ ಮಾತನಾಡಿ, ರಾಷ್ಟ್ರವ್ಯಾಪಿ ಶಾಂತಿ ಮತ್ತು ಮಾನವೀಯತೆ ಸ್ಥಾಪಿಸುವ ನಿಟ್ಟಿನಲ್ಲಿ ಆ. 24ರಿಂದ ಸೆ.4ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ಮಾತನಾಡಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಜ್ಯೋತಿ ರೀನಾ ಅಂದ್ರಾದೆ, ಹಿತಕರ ಜೈನ್, ಡಾ.ಭಾಗವತ್, ಹಬೀಬುಲ್ಲಾ ಖಾನ್, ಮಕ್ಬೂಲ್ ಅಹ್ಮದ್, ಎಂ.ಶಫಿಯುಲ್ಲಾ ಮತ್ತಿತರರು ಉಪಸ್ಥಿತರಿದ್ದರು.







