ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಧರಣಿ
ದಾವಣಗೆರೆ, ಸೆ.1: ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಹೆಸರಿನಲ್ಲಿ ಸ್ಕ್ಯಾನಿಂಗ್ ಕೇಂದ್ರಗಳು ಸೇರಿದಂತೆ ವೈದ್ಯರಿಗೆ ಕಿರುಕುಳ ನೀಡಲಾಗುತ್ತಿದ್ದು, ಗರ್ಭಪೂರ್ವ ಮತ್ತು ಪ್ರಸವಪೂರ್ವ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ರೇಡಿಯಾಲಜಿಸ್ಟ್, ಸೋನಾಲಾಜಿಸ್ಟ್ ವೈದ್ಯರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ವೈದ್ಯರು ಈ ಕೂಡಲೇ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಅಖಿಲ್ ಎಂ. ಕುಲಕರ್ಣಿ ಮಾತನಾಡಿ, ಭ್ರೂಣಲಿಂಗ ಪತ್ತೆ ಕಾಯ್ದೆ ಹೆಸರಿನಲ್ಲಿ ನಮಗೆ ನಿರಂತರವಾಗಿ ಒತ್ತಡ, ಕಿರುಕುಳ ನೀಡಲಾಗುತ್ತಿದೆ. ಕಾಯ್ದೆ ಹೆಸರಿನಲ್ಲಿ ಕೇಂದ್ರಗಳನ್ನು ಶೋಷಿಸಲಾಗುತ್ತಿದೆ. ಹೆಣ್ಣು ಭ್ರೂಣಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಕಾಪಾಡುವ ನಿಟ್ಟಿನಲ್ಲಿ ವೈದ್ಯರುಗಳು ಬದ್ಧತೆ ಹೊಂದಿದ್ದಾರೆ. ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳು ಭ್ರೂಣ ಪತ್ತೆ ಮಾಡುತ್ತಿಲ್ಲ. ಆದರೂ ವೈದ್ಯರನ್ನು ದೂಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕೆಲ ಅಧಿಕಾರಿಗಳು ಮನಬಂದಂತೆ ನಮ್ಮ ಮೇಲೆ ದಾಳಿ ನಡೆಸುತ್ತಿದ್ದು, ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ಹಾಕುತ್ತಿದ್ದಾರೆ. ಹಾಗೂ ಪರವಾನಿಗೆಯನ್ನು ರದ್ದುಪಡಿಸುತ್ತಿದ್ದಾರೆ.ಇದರಿಂದ ನಮಗೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಕಾಯ್ದೆಗೆ ತಿದ್ದುಪಡಿ ತಂದು ನಮ್ಮನ್ನು ಆತಂಕದಿಂದ ದೂರ ಮಾಡಬೇಕೆಂದು ಅವರು ಮನವಿ ಮಾಡಿದರು.
ಎಕ್ಸರೇ, ಅಲ್ಟ್ರಾ ಸೌಂಡ್, ಸ್ಕ್ಯಾನಿಂಗ್, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇರಿದಂತೆ ವೈದ್ಯಕೀಯ ಕ್ಷೇತ್ರದ ವಿವಿಧ ಸೌಲಭ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದ್ದು, ಶೀಘ್ರವೇ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಾ.ಅಖಿಲ್ ಎಂ. ಕುಲಕರ್ಣಿ, ಡಾ. ಚಂದನ್ ಗಿರಿಯಪ್ಪ, ಡಾ. ಕಿರಣ್ ಹೆಗಡೆ, ಡಾ. ವಿಜಯ್‌ಕುಮಾರ್, ಡಾ.ಕಿಶನ್ ಭಾಗವತ್, ಡಾ.ಅಶ್ವಿನ್ ಪಾಟೀಲ್, ಡಾ. ಪ್ರಮೋದ್ ಶೆಟ್ಟಿ, ಡಾ. ಜಿವಿಕಾ ಮತ್ತಿತರರು ಉಪಸ್ಥಿತರಿದ್ದರು.







