ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾದ ಜನ ಸಂಪರ್ಕ ಸಭೆ
ಜನ ಸಂಪರ್ಕ ಸಭೆ

ಸುಂಟಿಕೊಪ್ಪ, ಸೆ.1: ಕೊಡಗರಹಳ್ಳಿ ಚಿಕ್ಲಿ ಹೊಳೆ ರಸ್ತೆಗೆ ಸಂಬಂಧಿಸಿದಂತೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಜನ ಸಂಪರ್ಕ ಸಭೆ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾದ ಪ್ರಸಂಗ ಗುರುವಾರ ಜರಗಿತು. ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ, ಕಂಬಿಬಾಣೆಯ ಮಾಜಿ ಗ್ರಾಪಂ ಅಧ್ಯಕ್ಷ ಶಶಿಕಾಂತ ರೈ ಅವರು ಕೊಡಗರಹಳ್ಳಿ ಚಿಕ್ಲಿಹೊಳೆ ರಸ್ತೆ ಸಂಪೂರ್ಣ ಹದಗೆಟ್ಟಿರುವ ವಿಷಯ ಪ್ರಸ್ತಾಪಿಸಿ ಈ ರಸ್ತೆಗೆ ಯಾವಾಗ ಕಾಯಕಲ್ಪ ಸಿಗಲಿದೆ ಎಂದು ಪ್ರಶ್ನಿಸಿದಾಗ ಶಾಸಕ ಅಪ್ಪಚ್ಚು ರಂಜನ್, ಕಾಮಗಾರಿಗೆ ಈಗಾಗಲೇ 2 ಕೋಟಿ ರೂ. ಬಿಡುಗಡೆಯಾಗಿದೆ. ಭೂಮಿ ಪೂಜೆಯನ್ನು ಸೆ.4. ರಂದು ಅಪರಾಹ್ನ 12 ನೆರವೇರಿಸಲಿದ್ದೇನೆ ಎಂದರು. ಆಗ ಸಭೆಯ ವೇದಿಕೆಯಲ್ಲಿದ್ದ ಜಿಪಂ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ತಾನು ಸಹ ಈ ರಸ್ತೆಗೆ ಸರಕಾರದಿಂದ ಹಣ ಬಿಡುಗಡೆ ಗೊಳಿಸಲು ಶ್ರಮಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಂ ಅವರು ಸೆ.17 ರಂದು ಭೂಮಿಪೂಜೆ ನೆರವೇರಿಸಲಿದ್ದಾರೆ. ನೀವು ಮೊದಲೇ ಭೂಮಿ ಪೂಜೆ ನೆರವೇರಿಸುವುದು ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆರಳಿದ ಶಾಸಕ ಅಪ್ಪಚ್ಚು ರಂಜನ್, ಮಡಿಕೇರಿಯ ಖಾಸಗಿ ಬಸ್ ನಿಲ್ಧಾಣದ ಭೂಮಿ ಪೂಜೆ, ಜಿಪಂ ಸಂಕೀರ್ಣ ಕಟ್ಟಡದ ಭೂಮಿ ಪೂಜೆಗೆ ಜಿಲ್ಲಾ ಉಸ್ತುವಾರಿ ಸಚಿವರು ತನಗೆ ಆಹ್ವಾನ ನೀಡದೆ ಕ್ಷೇತ್ರದ ಶಾಸಕನನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ವಿದೇಶಕ್ಕೆ ತೆರಳಲಿದ್ದು, ಆ ಸಮಯದಲ್ಲಿ ಯಾವುದೇ ಕಾರ್ಯಕ್ರಮ ನನ್ನ ಕ್ಷೇತ್ರದಲ್ಲಿ ನಡೆಸಬಾರದೆಂದು ತಿಳಿಸಿದ್ದಾರೆ. ಕೊಡಗಿನ ಬಗ್ಗೆ ಏನೂ ಅರಿವಿಲ್ಲದ ಉಸ್ತುವಾರಿ ಸಚಿವರಿಂದ ಕೊಡಗಿನ ಅಭಿವೃದ್ಧಿ ಸಾಧ್ಯವೇ? ಎಂದು ಶಾಸಕರು ಹೇಳಿದಾಗ, ಚಂದ್ರಕಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಪ್ಪಚ್ಚು ರಂಜನ್ ತಾನು ಸೆ.4.ರಂದು ತಾನು ಗುದ್ದಲಿ ಪೂಜೆ ನಡೆಸುವುದಾಗಿ ಹೇಳಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಜನಪ್ರತಿನಿಧಿಗಳ ಮಾತಿನ ಚಕಮಕಿಗೆ ನೆರೆದಿದ್ದ ಅಧಿಕಾರಿಗಳು ಹಾಗೂ ಜನರು ಮೂಕ ಪ್ರೇಕ್ಷಕರಾಗಿದ್ದುದು ಕಂಡುಬಂತು.







