ದುಲೀಪ್ ಟ್ರೋಫಿ: ಇಂಡಿಯಾ ಬ್ಲೂ-ಇಂಡಿಯಾ ರೆಡ್ ಪಂದ್ಯ ಡ್ರಾ
ಯುವರಾಜ್ ಸಿಂಗ್ ಬಳಗ ಫೈನಲ್‌ಗೆ

ಗ್ರೇಟರ್‌ನೊಯ್ಡ, ಸೆ.1: ಇಂಡಿಯಾ ಬ್ಲೂ ಹಾಗೂ ಇಂಡಿಯಾ ರೆಡ್ ತಂಡಗಳ ನಡುವಿನ ದುಲೀಪ್ ಟ್ರೋಫಿ ಚತುರ್ದಿನ ಹಗಲು-ರಾತ್ರಿ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಕೊನೆಗೊಂಡಿದೆ.
ಪಂದ್ಯ ಡ್ರಾಗೊಂಡ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.
ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ 345 ನಿಮಿಷಗಳ ಪಂದ್ಯ ಆಡಲು ಸಾಧ್ಯವಾಗಿದೆ. ಬ್ಯಾಟಿಂಗ್ ಮಾಡಿದ್ದ ಇಂಡಿಯಾ ಬ್ಲೂ ತಂಡ 78.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 285 ರನ್ ಗಳಿಸಿದ್ದು, ಕನ್ನಡಿಗ ಮಯಾಂಕ್ ಅಗರವಾಲ್(92 ರನ್, 167ಎಸೆತ, 10 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ.
ಅಗರವಾಲ್ ಹಾಗೂ ನಾಯಕ ಗೌತಮ್ ಗಂಭೀರ್(77ರನ್, 143 ಎಸೆತ, 10 ಬೌಂಡರಿ) ಮೊದಲ ವಿಕೆಟ್‌ಗೆ 151 ರನ್ ಸೇರಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದರು. ಆದರೆ, ಸ್ಪಿನ್ನರ್ ಕುಲದೀಪ್ ಯಾದವ್(4-78) ದಾಳಿಗೆ ಸಿಲುಕಿದ ಬ್ಲೂ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಮೂರನೆ ದಿನವಾದ ಬುಧವಾರ 5ಕ್ಕೆ 285 ರನ್ ಗಳಿಸಿದ್ದ ಬ್ಲೂ ತಂಡ 4ನೆ ದಿನದಾಟವಾದ ಗುರುವಾರ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ನೀರು ಹಿಂಡಲು ಸೂಪರ್ ಸೋಪರ್ಸ್ ಯಂತ್ರ ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಔಟ್‌ಫೀಲ್ಡ್‌ಗೆ ಹೆಚ್ಚು ಹಾನಿ ಉಂಟಾಗಿತ್ತು. 2 ಪಂದ್ಯಗಳಲ್ಲಿ ಒಟ್ಟು 7 ಅಂಕಗಳನ್ನು ಗಳಿಸಿದ ಯುವರಾಜ್ ಸಿಂಗ್ ನೇತೃತ್ವದ ರೆಡ್ ತಂಡ ಫೈನಲ್‌ಗೆ ತಲುಪಿದೆ.
ಒಂದು ಅಂಕವನ್ನು ಗಳಿಸಿರುವ ಬ್ಲ್ಲೂ ತಂಡ ಶೂನ್ಯ ಸಂಪಾದಿಸಿರುವ ಗ್ರೀನ್ ತಂಡಕ್ಕಿಂತ ಮುಂದಿದೆ. ಈ ಪಂದ್ಯ ಡ್ರಾಗೊಂಡಿರುವ ಹಿನ್ನೆಲೆಯಲ್ಲಿ ಬ್ಲೂ ಹಾಗೂ ಗ್ರೀನ್ ತಂಡಗಳ ನಡುವೆ ಸೆ.4 ರಂದು ನಡೆಯುವ ಮುಂದಿನ ಪಂದ್ಯ ಸೆಮಿಫೈನಲ್ ಸ್ವರೂಪ ಪಡೆದಿದೆ. ಆದರೆ, ಪಂದ್ಯ ಗ್ರೇಟರ್ ನೊಯ್ಡೆದಲ್ಲೇ ನಡೆಯುತ್ತಿರುವ ಕಾರಣ ಪಂದ್ಯಕ್ಕೆ ಮಳೆಕಾಡುವ ಸಾಧ್ಯತೆ ಅಧಿಕವಿದೆ.
ಮತ್ತೊಂದು ಪಂದ್ಯವೂ ಮಳೆಗಾಹುತಿಯಾದರೆ ಗ್ರೀನ್ ತಂಡ ಕೂಟದಿಂದ ಹೊರ ನಡೆಯಲಿದೆ. ಬ್ಲೂ ತಂಡ ಮತ್ತೊಂದು ಅಂಕದೊಂದಿಗೆ ಫೈನಲ್‌ಗೆ ತಲುಪಲಿದೆ.







