ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿ ವಾಲ್ಶ್

ಸೈಂಟ್‌ಜಾನ್ಸ್, ಸೆ.1: ಬಾಂಗ್ಲಾದೇಶ ತಂಡಕ್ಕೆ ಸ್ಪೆಷಲಿಸ್ಟ್ ಬೌಲಿಂಗ್ ಕೋಚ್ ಆಗಿ ಮೂರು ವರ್ಷಗಳ ಒಪ್ಪಂದಕ್ಕೆ ವೆಸ್ಟ್‌ಇಂಡೀಸ್‌ನ ಮಾಜಿ ವೇಗದ ಬೌಲರ್ ಕೋರ್ಟ್ನಿ ವಾಲ್ಶ್ ಸಹಿ ಹಾಕಿದ್ದಾರೆ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.
ವಾಲ್ಶ್ ಕಳೆದ ಎರಡು ವರ್ಷಗಳಿಂದ ವೆಸ್ಟ್‌ಇಂಡೀಸ್ ಆಯ್ಕೆ ಸಮಿತಿಯಲ್ಲಿದ್ದು, ಅವರ ಅಧಿಕಾರದ ಅವಧಿ ಇದೇ ತಿಂಗಳು ಕೊನೆಗೊಳ್ಳಲಿದೆ. ಸೆಪ್ಟಂಬರ್‌ನಲ್ಲಿ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.
‘‘ಸ್ಪೆಷಲಿಸ್ಟ್ ಬೌಲಿಂಗ್ ಕೋಚ್ ಆಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಯನ್ನು ಸೇರ್ಪಡೆಯಾಗಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ನೋಡುತ್ತಿರುವೆ. ಆ ತಂಡದಲ್ಲಿ ಪ್ರತಿಭಾವಂತ ಆಟಗಾರರ ದಂಡೇ ಇದೆ. ಚಂಡಿಕಾ ಹಥುರುಸಿಂೆ ಕೋಚ್ ಆಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಚಂಡಿಕಾರಿಗೆ ಉತ್ತಮ ಸಾಥ್ ನೀಡುವ ವಿಶ್ವಾಸ ನನಗಿದೆ’’ಎಂದು ವಾಲ್ಶ್ ಪ್ರತಿಕ್ರಿಯಿಸಿದ್ದಾರೆ.
17 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ವಾಲ್ಶ್ ಟೆಸ್ಟ್‌ನಲ್ಲಿ 519 ವಿಕೆಟ್ ಹಾಗೂ ಏಕದಿನದಲ್ಲಿ 227 ವಿಕೆಟ್‌ಗಳನ್ನು ಉರುಳಿಸಿದ್ದರು. 1987ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗನಾಗಿ ನೇಮಕಗೊಂಡಿದ್ದರು.





