ಈ ಸ್ನೇಹಕ್ಕೆತೆರಬೇಕಾದ ಶುಲ್ಕವೆಷ್ಟು?
ಕಪ್ಪೆಗಳೆಲ್ಲ ಒಂದಾಗಿ ಹಾವಿನ ಸ್ನೇಹ ಬೆಳೆಸಿ ನಾಶವಾದ ಕತೆಯನ್ನು ನಾವು ಓದಿದ್ದೇವೆ. ಕರಡಿಯು ನರಿಯ ಜೊತೆಗೆ ಸ್ನೇಹ ಬೆಳೆಸಿ, ಜೊತೆಯಾಗಿ ಕೃಷಿ ಮಾಡಿ ಮೋಸ ಹೋದ ಕತೆಯನ್ನ್ನೂ ನಾವು ಓದಿದ್ದೇವೆ. ಬಲಾಢ್ಯನ ಜೊತೆಗೆ ದುರ್ಬಲರು ಸ್ನೇಹ ಮಾಡಿದರೆ ಅದರ ಸಕಲ ಲಾಭವನ್ನೂ ಬಲಾಢ್ಯನೇ ತನ್ನದಾಗಿಸಿಕೊಳ್ಳುತ್ತಾನೆ ಎನ್ನುವ ಪಂಚತಂತ್ರದ ಕತೆ ಹುಟ್ಟಿರುವುದು ಭಾರತದಲ್ಲೇ ಆಗಿದ್ದರೂ, ಆ ಕತೆಯಿಂದ ನೀತಿಯನ್ನು ಕಲಿಯಲು ಮಾತ್ರ ನಮ್ಮ ಸರಕಾರ ಸಂಪೂರ್ಣ ವಿಲವಾಗುತ್ತಿದೆ. ಹೆಬ್ಬಾವನ್ನು ಓಡಿಸಲು ನಾಗರಹಾವಿನ ಸ್ನೇಹ ಬೆಳೆಸಲು ಹೊರಟಿದೆ ಭಾರತ. ಮತ್ತು ಆ ಸ್ನೇಹಕ್ಕೆ ರಕ್ಷಣಾ ಸಹಕಾರ ಒಪ್ಪಂದ ಎಂಬ ಸುಂದರ ಹೆಸರು ಬೇರೆ. ಸೇನಾ ಸಹಕಾರ ವಿನಿಮಯ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದನ್ನು ನಮ್ಮ ಮಾಧ್ಯಮಗಳಂತೂ ಭಾರತದ ಗೆಲವು ಎಂಬಂತೆ ವ್ಯಾಖ್ಯಾನಿಸಲು ಮುಂದಾಗಿದೆ. ಮೋದಿಯ ಸಾಧನೆ ಎಂಬ ಭ್ರಮೆಯನ್ನು ಸೃಷ್ಟಿಸಿ, ಜನರನ್ನು ವಿಸ್ಮತಿಗೆ ತಳ್ಳಿದೆ. ನಿಜಕ್ಕೂ ಇದರಿಂದ ಭಾರತಕ್ಕೆ ಆಗುವ ಮುಖ್ಯ ಲಾಭಗಳೇನು? ‘ಪಾಕಿಸ್ತಾನ-ಚೀನಾಕ್ಕಾಗಿರುವ ಆತಂಕ’ವೇ ಭಾರತಕ್ಕಾಗಿರುವ ಲಾಭ ಎಂದು ಕೆಲ ಮೂರ್ಖ ಮಾಧ್ಯಮಗಳು ವ್ಯಾಖ್ಯಾನಿಸುತ್ತಿವೆ. ಈ ಸ್ನೇಹದಿಂದ ಭಾರತ ವೈಯಕ್ತಿಕವಾಗಿ ಕಳೆದುಕೊಳ್ಳೋದರ ಕುರಿತಂತೆ ಇವುಗಳು ತುಟಿ ಬಿಚ್ಚುತ್ತಿಲ್ಲ.
ಇರಾಕ್ ವಿರುದ್ಧ ಯುದ್ಧದ ಸಂದರ್ಭದಲ್ಲಿ ಅಮೆರಿಕ ಭಾರತದ ಸೇನಾ ನೆಲೆಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವ ವದಂತಿ, ಇಡೀ ಭಾರತದೊಳಗೆ ತಲ್ಲಣವನ್ನು ಸೃಷ್ಟಿಸಿತ್ತು. ಬಳಿಕ ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ಸಾರಾಸಗಟಾಗಿ ನಿರಾಕರಿಸಿದ್ದರು. ಇದೀಗ ಮೋದಿ ನೇತೃತ್ವದ ಸರಕಾರ ಯಾವ ಮುಜುಗರವೂ ಇಲ್ಲದೆ ಭಾರತದ ಸೇನಾ ನೆಲೆಯನ್ನು ಅಮೆರಿಕದ ಜೊತೆ ಹಂಚಿಕೊಳ್ಳಲು ಮುಂದಾಗಿದೆ. ಈ ಒಪ್ಪಂದಕ್ಕೆ ಒಂದು ದಶಕದ ಸುದೀರ್ಘ ಹಿನ್ನೆಲೆಯಿದೆ. ಇದು ಅಣುಭದ್ರತಾ ಒಪ್ಪಂದದ ಮುಂದುವರಿದ ಭಾಗವೂ ಹೌದು. ಹಾಗೆ ನೋಡಿದರೆ, ದೇಶದ ಭದ್ರತೆಯ ಕುರಿತಂತೆ ಯುಪಿಎ ಸರಕಾರ ಇಷ್ಟು ವೇಗವಾಗಿ ಮತ್ತು ಧಾರ್ಷ್ಟತನದಲ್ಲಿ ಮುಂದುವರಿದಿರಲಿಲ್ಲ. ಉದಾರೀಕರಣದ ಹೆಬ್ಬಾಗಿಲು ತೆರೆದದ್ದು ಪಿ. ವಿ. ನರಸಿಂಹರಾವ್ ಅವರ ಅವಯಲ್ಲೇ ಆಗಿದ್ದರೂ, ಅದು ಇನಷ್ಟು ವೇಗವನ್ನು ಪಡೆದುಕೊಂಡದ್ದು ಎನ್‌ಡಿಎ ಸರಕಾರದ ಅವಯಲ್ಲಿ. ಮೋದಿ ಸರಕಾರವಂತೂ ಜನರನ್ನು, ದೇಶದ ಸಾರ್ವಭೌಮತೆಯನ್ನು ಯಾವ ಅಂಜಿಕೆಯೂ ಇಲ್ಲದೆ ವಿದೇಶಕ್ಕೆ ಒತ್ತೆ ಇಟ್ಟಿದೆ. ಯುಪಿಎ ಸರಕಾರ ಈ ದೇಶದ ಚಿಲ್ಲರೆ ವ್ಯಾಪಾರವನ್ನು ವಿದೇಶಿ ನೇರ ಹೂಡಿಕೆಗೆ ಸಣ್ಣ ಪ್ರಮಾಣದಲ್ಲಿ ತೆರೆದಿಟ್ಟಾಗ, ಬಿಜೆಪಿ ಆಕಾಶ ಭೂಮಿ ಒಂದು ಮಾಡಿತ್ತು. ಆದರೆ ಮೋದಿ ನೇತೃತ್ವದ ಸರಕಾರ ಅಕಾರಕ್ಕೆ ಬಂದ ಕೆಲವೇ ತಿಂಗಳಲ್ಲೇ ಇಡೀ ವಲಯವನ್ನೇ ಸಂಪೂರ್ಣ ಎ್ಡಿಐಗೆ ತೆರೆದಿಟ್ಟಿತು ಮತ್ತು ಅದಕ್ಕೆ ಅಭಿವೃದ್ಧಿಯ ಬಣ್ಣದ ಹೊದಿಕೆಯನ್ನು ಕೊಟ್ಟಿತು. ಮೇಕ್ ಇನ್ ಇಂಡಿಯಾದ ಹೆಸರಲ್ಲಿ ರಕ್ಷಣಾ ವಲಯವನ್ನೂ ವಿದೇಶಗಳಿಗೆ ಒಪ್ಪಿಸಿತು. ಅಂತಹ ಸಂದರ್ಭದಲ್ಲೂ ಅದು ಈ ದೇಶದ ಮೇಲೆ ಬೀರುವ ಪರಿಣಾಮಗಳ ಕುರಿತಂತೆ ಒಂದಿಷ್ಟೂ ಯೋಚನೆಯನ್ನು ಮಾಡಲಿಲ್ಲ. ಮುಖ್ಯವಾಗಿ ಇಡೀ ದೇಶವನ್ನು ಭಾಗಶಃ ವಿದೇಶಿಯರ ಕೈಗೆ ಯಾವ ಅಂಜಿಕೆ, ಕೀಳರಿಮೆಯಿಲ್ಲದೆ ಹೆಮ್ಮೆಯಿಂದ ಒಪ್ಪಿಸಿದ ಸರ್ವ ಹೆಗ್ಗಳಿಕೆಯೂ ನರೇಂದ್ರ ಮೋದಿ ಸರಕಾರಕ್ಕೆ ಸಲ್ಲಬೇಕು. ರಕ್ಷಣಾ ಸಹಕಾರ ಒಪ್ಪಂದ ಅದರ ಮುಂದುವರಿದ ಭಾಗವಾಗಿದೆ. ಈ ಒಪ್ಪಂದದಿಂದ ಯಾರು ಹೆಚ್ಚು ಲಾಭವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎನ್ನುವುದನ್ನು ವಿವರಿಸಬೇಕಾಗಿಲ್ಲ. ಈ ಒಪ್ಪಂದದ ಅಂತಿಮ ಸಾರವೆಂದರೆ ಅಮೆರಿಕ ತನ್ನ ಹಿತಾಸಕ್ತಿಗಾಗಿ ಭಾರತವನ್ನು ಗುರಾಣಿಯಾಗಿ ಬಳಸಿಕೊಳ್ಳಲಿದೆ. ಸ್ವಾತಂತ್ರ ಬಂದ ಬೆನ್ನಿಗೇ ತನ್ನ ಸಾರ್ವಭೌಮತೆಯನ್ನು ಬಲಿಕೊಟ್ಟು, ಅಮೆರಿಕಕ್ಕೆ ಸೆರಗು ಹಾಸಿದ ಪರಿಣಾಮವನ್ನು ಇಂದು ಪಾಕಿಸ್ತಾನ ಉಣ್ಣುತ್ತಿದೆ. ಅಂದು ಪಾಕಿಸ್ತಾನ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದರ ಮುಂದಿದ್ದದ್ದು ಭಾರತವೆನ್ನುವ ದಾಯಾದಿ ರಾಷ್ಟ್ರ. ತನ್ನ ದೇಶದ ಅಭಿವೃದ್ಧಿ, ಹಿತಾಸಕ್ತಿಗಿಂತಲೂ ಭಾರತದ ಪತನವೇ ಮುಖ್ಯವೆನ್ನುವ ಜಿದ್ದಿಗಾಗಿ ಅದು ಅಮೆರಿಕದ ಸ್ನೇಹಕ್ಕೆ ಹಂಬಲಿಸಿತು. ಇಂದು ಅಮೆರಿಕದ ಡ್ರೋನ್‌ಗಳು ತನ್ನದೇ ನೆಲದ ಮೇಲೆ ಹಾರಾಡಿದರೂ, ತನ್ನದೇ ಜನರನ್ನು ಕೊಂದು ಹಾಕಿದರೂ ಅದನ್ನು ಪ್ರತಿಭಟಿಸಲಾಗದಂತಹ ಸ್ಥಿತಿಗೆ ಬಂದು ನಿಂತಿದೆ ಪಾಕಿಸ್ತಾನ. ಇದೀಗ ಭಾರತ ತನ್ನ ನೆರೆಹೊರೆಯೊಂದಿಗಿನ ಸಂಬಂಧವನ್ನು ಅತ್ಯಂತ ಬೇಜವಾಬ್ದಾರಿಯಿಂದ ನಿಭಾಯಿಸುತ್ತಾ, ಅವರನ್ನು ಬೆದರಿಸಲು ಅತ್ಯಾತುರದಿಂದ ಅಮೆರಿಕದ ಜೊತೆಗೆ ರಕ್ಷಣಾ ಹೊಂದಾಣಿಕೆಗೆ ಸಹಿ ಹಾಕಿದೆ. ಭಾರತವು ಅಮೆರಿಕಕ್ಕೆ ಒತ್ತೆಯಿಟ್ಟಿರುವುದು ತನ್ನ ಸಾರ್ವಭೌಮತೆಯನ್ನು. ಒಮ್ಮೆ ಅಮೆರಿಕ ಭಾರತದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದ್ದೇ ಆದರೆ ನಮಗೆ ಇಷ್ಟವಿಲ್ಲದೇ ಇದ್ದಾಗ ಎದ್ದು ಹೋಗು ಎನ್ನುವಂತಿಲ್ಲ ಎನ್ನುವ ವಾಸ್ತವ ಅರಿವಿಗೆ ಬರಲು ಹೆಚ್ಚು ವರ್ಷ ಬೇಕಾಗಿಲ್ಲ.
ಭಾರತಕ್ಕೆ ನೆರೆಯ ಚೀನಾ ಮತ್ತು ಪಾಕ್‌ನಿಂದ ಆತಂಕವಿದೆ ಎನ್ನುವುದು ಸತ್ಯ. ಒಂದು ದೇಶ ಅಭಿವೃದ್ಧಿ ಹೊಂದ ಬೇಕಾದರೆ ಅದು ತನ್ನ ನೆರೆಹೊರೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು ಅತ್ಯಗತ್ಯ. ಯುದ್ಧ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗಲಾರದು. ಮೋದಿ ಸರಕಾರ ಅಕಾರಕ್ಕೆ ಬಂದ ಬಳಿಕ, ನೆರೆ ಹೊರೆಯ ಸಂಬಂಧ ಈ ಹಿಂದಿಗಿಂತಲೂ ಹದಗೆಟ್ಟಿದೆ. ಬೇಜವಾಬ್ದಾರಿ ಸಚಿವರುಗಳ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಇದೀಗ ಅಮೆರಿಕದ ಜೊತೆಗಿನ ಸ್ನೇಹ ತನ್ನ ನೆರೆಯ ರಾಷ್ಟ್ರಗಳನ್ನು ಬಾಲ ಮಡಚುವಂತೆ ಮಾಡುತ್ತದೆ ಎಂದು ನಮ್ಮ ಸರಕಾರ ಭಾವಿಸಿದೆ. ಒಂದು ವೇಳೆ, ಅನಿವಾರ್ಯ ಸಂದರ್ಭದಲ್ಲಿ ಭಾರತದ ಸೇನಾ ನೆಲೆಯನ್ನು ಅಮೆರಿಕ ಬಳಸಿತೆಂದಾದರೆ ಅದು ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಇನ್ನಷ್ಟು ಕೆಡಿಸುತ್ತದೆ. ಚೀನಾ-ಭಾರತದ ಜೊತೆಗಿನ ಅಳಿದುಳಿದ ಸಂಬಂಧಗಳ ಮೇಲೂ ಅದು ಪರಿಣಾಮ ಬೀರಲಿದೆ. ಉಪಖಂಡ ಶೀತಲ ಸಮರಕ್ಕೆ ಬಲಿಯಾಗಬೇಕಾಗುತ್ತದೆ. ಚೀನಾ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ಇನ್ನಷ್ಟು ಬಲವಾಗುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ನೇಪಾಳವೂ ಭಾರತದೊಂದಿಗೆ ಸಂಬಂಧ ಕಡಿದುಕೊಂಡು ಚೀನಾದ ಸ್ನೇಹ ಮಾಡಲು ಹಂಬಲಿಸುತ್ತಿದೆ. ಇಂತಹ ಸಂದರ್ಭವನ್ನು ಅಮೆರಿಕ ತನಗೆ ಪೂರಕವಾಗಿ ಬಳಸಿಕೊಂಡು, ಭಾರತದೊಳಗೆ ಶಾಶ್ವತವಾಗಿ ಬೇರೂರುವ ಸಾಧ್ಯತೆಗಳಿವೆ. ಬಳಿಕ ಅದು ಬೇರೆ ಬೇರೆ ರೀತಿಯಲ್ಲಿ ಭಾರತದ ಮೇಲೆ ತನ್ನ ಅಕಾರವನ್ನು ವಿಸ್ತರಿಸುವ ಸಂದರ್ಭವೂ ಎದುರಾಗಬಹುದು.
ಒಟ್ಟಿನಲ್ಲಿ ಅಮೆರಿಕದ ರಕ್ಷಣಾ ಸ್ನೇಹದಿಂದ ಭಾರತದ ಸಾರ್ವಭೌಮತೆ ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿ ಸಿಲುಕಿಕೊಂಡಿದೆ. ದೇಶಪ್ರೇಮದ ಹೆಸರಲ್ಲಿ ಅಕಾರ ಹಿಡಿದ ಬಿಜೆಪಿ ಸರಕಾರವೇ ಇದಕ್ಕೆ ಕಾರಣವಾಗಿರುವುದು ಈ ದೇಶದ ದುರಂತಗಳಲ್ಲೊಂದು. ದೇಶಪ್ರೇಮವೆನ್ನುವುದು ಸ್ವದೇಶಿವಾದ, ಸ್ವಾವಲಂಬಿತನ, ಆಹಾರ ಭದ್ರತೆ, ಕೃಷಿ ಇತ್ಯಾದಿಗಳೆಂದು ನಂಬಿದ ಜನರಿಗೆ, ಬಿಜೆಪಿ ಸರಕಾರ ಭಾರೀ ದ್ರೋಹವನ್ನು ಎಸಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಯಾವ ರೂಪವನ್ನು ತಾಳಿ ದೇಶವನ್ನು ಬಲಿ ತೆಗೆದುಕೊಳ್ಳುತ್ತದೋ ಎನ್ನುವುದನ್ನು ಕಾಲವೇ ಹೇಳಬೇಕು.





