‘ಮಿನಿ ಐಪಿಎಲ್’ಗೆ ತಡೆ: ಅನುರಾಗ್ ಠಾಕೂರ್

ನ್ಯೂಯಾರ್ಕ್, ಸೆ.1: ಅಮೆರಿಕದಲ್ಲಿ ‘ಮಿನಿ ಐಪಿಎಲ್’ ಆಯೋಜಿಸುವ ಯೋಜನೆಗೆ ಬಿಸಿಸಿಐ ತಾತ್ಕಾಲಿಕ ತಡೆ ಹೇರಿದೆ ಎಂದು ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ. ಅಮೆರಿಕದ ಮಾರುಕಟ್ಟೆಯಲ್ಲಿ ತಲುಪಲು ಈಗಾಗಲೇ ಭಾರತ-ವೆಸ್ಟ್‌ಇಂಡೀಸ್ ನಡುವಿನ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಮಿನಿ ಐಪಿಎಲ್ ನಡೆಸದೇ ಇರಲು ಸಮಯದ ಬದಲಾವಣೆ ಅಡ್ಡಿಯಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
‘‘ನಾವು ಸಮಯದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಐಪಿಎಲ್‌ನ್ನು ರಾತ್ರಿ 7 ರಿಂದ 11 ಅಥವಾ 11:30ರ ತನಕ ನೋಡಬಹುದು. ಆದರೆ, ಅಮೆರಿಕದಲ್ಲಿ ಹಗಲಲ್ಲಿ ಐಪಿಎಲ್ ಆಡಿದರೆ ಭಾರತದಲ್ಲಿ ರಾತ್ರಿ ಪ್ರಸಾರ ವಾಗುತ್ತದೆ. ಹೀಗಾಗಿ ಪಂದ್ಯದ ಪ್ರಸಾರವೇ ದೊಡ್ಡ ತಲೆನೋವು. ಭಾರತದಿಂದ ಹೊರಗೆ ಐಪಿಎಲ್ ಆಡುವ ಮೂಲಕ ಅಭಿಮಾನಿಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಠಾಕೂರ್ ತಿಳಿಸಿದ್ದಾರೆ.
ಬಿಸಿಸಿಐ ಮಿನಿ ಐಪಿಎಲ್ ಅಥವಾ ಐಪಿಎಲ್ ಓವರ್‌ಸೀಸ್ ಯೋಜನೆಯನ್ನು ಜೂನ್‌ನಲ್ಲಿ ಘೋಷಿಸಿತ್ತು. ಈ ಹಿಂದೆ ನಡೆದ ಐಪಿಎಲ್ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಅಮೆರಿಕ ಹಾಗೂ ಯುಎಇನಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು.





