ಯುರೋಪ್‌ನಲ್ಲಿ ಆಡಿದ್ದರಿಂದ ಲಾಭ: ಗುರುಪ್ರೀತ್ ಸಿಂಗ್
ಮುಂಬೈ, ಸೆ.1: ‘‘ಯುರೋಪ್‌ನಲ್ಲಿ ಫುಟ್ಬಾಲ್ ಆಡಿದ್ದರಿಂದ ನನಗೆ ಹಾಗೂ ಭಾರತೀಯ ಫುಟ್ಬಾಲ್‌ಗೆ ಬಹಳಷ್ಟು ಲಾಭವಾಗಿದೆ’’ ಎಂದು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅಭಿಪ್ರಾಯಪಟ್ಟಿದ್ದಾರೆ.
‘‘ಯುರೋಪ್‌ನಲ್ಲಿ ಆಡುವುದು ನನ್ನ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ನನಗೆ ಉತ್ತಮ ಆಟಗಾರನಾಗಲು ನೆರವಾಗುತ್ತದೆ. ಭಾರತದ ಆಟಗಾರರು ವಿದೇಶದಲ್ಲಿ ಆಡಿದರೆ ಲಾಭವೇ ಅಧಿಕ. ಇದು ಅತ್ಯಂತ ಮುಖ್ಯ ಅಂಶವಾಗುತ್ತದೆ. ಭಾರತದ ಫುಟ್ಬಾಲ್ ಅಭಿವೃದ್ದಿ ಕಾಣಲು ಇದೊಂದು ಏಕೈಕ ದಾರಿಯಾಗಿದೆ’’ಎಂದು ಸುದ್ದಿಗಾರರಿಗೆ ಸಿಂಧು ತಿಳಿಸಿದ್ದಾರೆ.
ಸಂಧು ವಿದೇಶಿ ಲೀಗ್‌ವೊಂದರಲ್ಲಿ ಆಡುತ್ತಿರುವ ಭಾರತ ಫುಟ್ಬಾಲ್ ತಂಡದ ಏಕೈಕ ಆಟಗಾರನಾಗಿದ್ದಾರೆ. 2014ರಿಂದ ನಾರ್ವೆಯ ಕ್ಲಬ್ ಸ್ಟಬೆಕ್‌ನಲ್ಲಿ ಆಡುತ್ತಿದ್ದಾರೆ. ಜೂ.30 ರಂದು ನಡೆದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೋಲು ಬಾರಿಸಿದ್ದ ಸಂಧು ಯುಇಎಫ್‌ಎ ಯುರೋಪ್ ಲೀಗ್‌ನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು.
ಭಾರತದ ಫುಟ್ಬಾಲ್ ತಂಡ ಸೆ.3 ರಂದು ನಡೆಯಲಿರುವ ಪೊರ್ಟೊರಿಕೊ ವಿರುದ್ಧ ಸೌಹಾರ್ದ ಪಂದ್ಯಕ್ಕೆ ಸಜ್ಜಾಗುತ್ತಿದೆ. ‘‘ನಾನು ಮುಂದಿನ ಪಂದ್ಯಕ್ಕೆ ಸಜ್ಜಾಗಿರುವೆ. ಭಾರತದ ಪರ ಆಡಲು ಯಾವಾಗಲೂ ಹಾತೊರೆಯುತ್ತಿರುವೆ. ಪೊರ್ಟೊರಿಕೊ ತಂಡ ರ್ಯಾಂಕಿಂಗ್‌ನಲ್ಲಿ ನಮಗಿಂತ ಉತ್ತಮ ತಂಡ. ನಾವು ಎಲ್ಲ ಹೋರಾಟಕ್ಕೆ ಸಜ್ಜಾಗಿದ್ದು, ಹೋರಾಟ ನೀಡಲಿದ್ದೇವೆ. ಭಾರತ ಯಾವಾಗಲೂ ಅಗ್ರ ರ್ಯಾಂಕಿನ ತಂಡದ ವಿರುದ್ಧ ಆಡುತ್ತಿರಬೇಕು’’ ಎಂದು ಸಂಧು ತಿಳಿಸಿದ್ದಾರೆ.







