ಸೈಬರ್ ಭದ್ರತೆಗೆ ರಾಷ್ಟ್ರೀಯ ಸಮನ್ವಯ ಕೇಂದ್ರ

ಪ್ರಾದೇಶಿಕ ಸಂಪಾದಕರ ಸಮಾವೇಶದಲ್ಲಿ ಸಚಿವ ರವಿಶಂಕರ್ ಘೋಷಣೆ
ಚೆನ್ನೈ, ಸೆ.1: ದೇಶದ ಸೈಬರ್ ವಲಯವನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಸೈಬರ್ ಭದ್ರತಾ ಸಮನ್ವಯ ಕೇಂದ್ರ (ಎನ್‌ಸಿಸಿ)ವನ್ನು ಸ್ಥಾಪಿಸಲಾಗುವುದೆಂದು ಕೇಂದ್ರ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ಗುರುವಾರ ಪ್ರಾದೇಶಿಕ ಸಂಪಾದಕರ ಸಮಾವೇಶದಲ್ಲಿ ಮಾತ ನಾಡುತ್ತಿದ್ದ ಅವರು, ದೇಶದ ಸೈಬರ್ ಭದ್ರತೆಗೆ ಬೆದರಿಕೆ ಎದುರಾಗಿರುವ ಬಗ್ಗೆ ಕೇಂದ್ರ ಸರಕಾರಕ್ಕೆ ಸಂಪೂರ್ಣ ಅರಿವಿದೆ. ನೂತನವಾಗಿ ಸ್ಥಾಪನೆ ಯಾಗಲಿರುವ ಎನ್‌ಸಿಸಿಸಿಯು ಇಂತಹ ಸೈಬರ್ ಬೆದರಿಕೆಗಳ ಬಗ್ಗೆ ಸಮಯಾನುಸಾರ ವಿಶ್ಲೇಷಣೆ ನಡೆಸಲಿದೆ ಹಾಗೂ ಸರಕಾರಕ್ಕೆ ಮುನ್ನೆಚ್ಚರಿಕೆಗಳನ್ನು ನೀಡಲಿದೆ ಹಾಗೂ ವರದಿಗಳನ್ನು ಸಲ್ಲಿಸ ಲಿದೆಯೆಂದು ಅವರು ಹೇಳಿದರು.
ಭಾರತವನ್ನು ಡಿಜಿಟಲ್ ಸಶಕ್ತ ಸಮಾಜವಾಗಿ ರೂಪಿಸಲು ಕೇಂದ್ರ ಸರಕಾರ ಬದ್ಧವಾಗಿದೆಯೆಂದು ಅವರು ತಿಳಿಸಿದರು. ಡಿಜಿಟಲ್ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ವಿವರಿಸಿದ ಅವರು, ಪ್ರಸ್ತುದ ದೇಶದಲ್ಲಿ 104 ಕೋಟಿ ಆಧಾರ್ ಬಳಕೆದಾರರು, 103 ಕೋಟಿ ಮೊಬೈಲ್ ಫೋನ್‌ಗಳು ಹಾಗೂ 40 ಕೋಟಿ ಇಂಟರ್‌ನೆಟ್ ಬಳಕೆದಾರರಿದ್ದಾರೆ. ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯು ಶೀಘ್ರದಲ್ಲೇ 50 ಕೋಟಿಯ ಗಡಿಯನ್ನು ದಾಟಲಿದೆ ಎಂದರು.
ಪ್ರಸ್ತುತ ಇ-ಕಾಮರ್ಸ್‌ನಿಂದ ದೊರೆಯುವ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಗಳು ಕೂಡಾ ಸಮರ್ಥವಾಗಿ ಬಳಸಿಕೊಳ್ಳುತ್ತಿವೆಯೆಂದ ರವಿಶಂಕರ್ 26 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂ ದಾಖಲೆಗಳನ್ನು ಕಂಪ್ಯೂಟರೀಕರಿಸಲಾಗಿದೆ. 2.50 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಅತ್ಯಂತ ವೇಗದ ಇಂಟರ್‌ನೆಟ್ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದರು.
ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆಯನ್ನು ಆರಂಭಿಸಲಿದ್ದು, ಆ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಲಿದೆಯೆಂದು ರವಿಶಂಕರ್ ಪ್ರಸಾದ್ ತಿಳಿಸಿದರು.
ಕೇಂದ್ರ ವಸತಿ ಹಾಗೂ ನಗರ ಬಡತನ ನಿವಾರಣೆ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ನಗರ ಪ್ರದೇಶಗಳು ಮೂಲಸೌಕರ್ಯದ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು.







