ವಿಚಾರಣೆ ಎದುರಿಸಲು ಸಿದ್ಧ: ಸುಪ್ರೀಂಕೋರ್ಟ್‌ಗೆ ರಾಹುಲ್
ಆರೆಸ್ಸೆಸ್ ಮಾನನಷ್ಟ ಮೊಕದ್ದಮೆ
ಹೊಸದಿಲ್ಲಿ, ಸೆ.1: ಆರೆಸ್ಸೆಸ್‌ನ ಮಾನನಷ್ಟ ಆರೋಪದಲ್ಲಿ ವಿಚಾರಣೆ ಎದುರಿಸಲು ಸಿದ್ಧನಿದ್ದೇನೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗಿಂದು ತಿಳಿಸಿದ್ದಾರೆ. 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಆರೆಸ್ಸೆಸ್ ನಡೆಸಿತ್ತೆಂದು 2014ರ ಚುನಾವಣಾ ಪೂರ್ವ ಭಾಷಣವೊಂದರಲ್ಲಿ ಹೇಳಿದ್ದರೆಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
ಮಹಾತ್ಮಗಾಂಧಿಯವರ ಸಾವಿಗೆ ಆರೆಸ್ಸೆಸ್ ಸಂಸ್ಥೆ ಕಾರಣವಲ್ಲವೆಂದು ರಾಹುಲ್ ಬಹಿರಂಗವಾಗಿ ಹೇಳಿಕೆ ನೀಡಿದರೆ ಅವರ ವಿರುದ್ಧದ ಪ್ರಕರಣವನ್ನು ಹಿಂದೆಗೆಯಬಹುದೆಂದು ಆರೆಸ್ಸೆಸ್ ಸ್ಪಷ್ಟಪಡಿಸಿತ್ತು. ಅದಕ್ಕೆ ನಿರಾಕರಿಸಿದ ರಾಹುಲ್, ಪ್ರಕರಣವನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮಾಡಿದ್ದ ಮನವಿಯನ್ನು ಹಿಂದೆಗೆದಿದ್ದಾರೆ. ತಾನು ಹೇಳಿದುದಕ್ಕೆ ಬದ್ಧನಾಗಿದ್ದೇನೆಂದು ಅವರು ಹಿರಿಯ ವಕೀಲ ಕಪಿಲ್ ಸಿಬಲ್‌ರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೆಳ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವುದಕ್ಕೆ ವಿನಾಯಿತಿ ನೀಡಬೇಕೆಂಬ ರಾಹುಲ್‌ರ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.





