ನ್ಯಾಯಮೂರ್ತಿಗಳ ನಿಂದನೆಗೆ ಕ್ಷಮೆ ಯಾಚನೆ
ವಕೀಲ ಓಝಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ರದ್ದು
ಹೊಸದಿಲ್ಲಿ, ಸೆ.1: ಗುಜರಾತ್ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಹತ್ತಿರದವರಾಗಿದ್ದಾರೆಂಬ ತನ್ನ ಹೇಳಿಕೆಗಾಗಿ ‘ನಿಶ್ಶರ್ತ ಕ್ಷಮೆ’ ಯಾಚಿಸಿದ ಬಳಿಕ, ಹೈಕೋರ್ಟ್‌ನ ಹಿರಿಯ ವಕೀಲ ಯತಿನ್ ನರೇಂದ್ರ ಓಝಾರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಕೈಬಿಟ್ಟಿದೆ.
ಓಝಾರ ನಿಶ್ಶರ್ತ ಕ್ಷಮಾ ಯಾಚನೆಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಸಿ. ನಾಗಪ್ಪನ್‌ರನ್ನೊಳಗೊಂಡ ಪೀಠವೊಂದು, ಗುಜರಾತ್ ಹೈಕೋರ್ಟ್‌ನಲ್ಲಿ ಅವರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಲಾಗಿದೆಯೆಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಾಲಯದ ವಿಚಾರಣೆಯ ವೇಳೆ ಹೊರತು ತಾನೀ ವಿಷಯವನ್ನು ಬಹಿರಂಗವಾಗಿ ಮಾತನಾಡುವುದಿಲ್ಲವೆಂದು ಓಝಾ ಹೊಸ ಅಫಿದಾವಿತ್ ಒಂದನ್ನು ದಾಖಲಿಸಿದ್ದರು.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಕೆ.ಎಸ್. ಝವೇರಿಯವರಿಗೆ ದೇಶದ ಸಂವಿಧಾನದಲ್ಲಿ ನಿಷ್ಠೆಯಿಲ್ಲ. ಅದನ್ನವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ನಿವಾಸಗಳಲ್ಲಿ ಒತ್ತೆಯಿಟ್ಟಿದ್ದಾರೆಂದು ಭಾರತದ ಮುಖ್ಯ ನ್ಯಾಯಮೂರ್ತಿಗೆ ಓಝಾ ಪತ್ರವೊಂದನ್ನು ಬರೆದ ಬಳಿಕ, ಗುಜರಾತ್ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ವಿಚಾರಣೆಗೆ ಚಾಲನೆ ನೀಡಿತ್ತು.





