ಸಿಂಗಾಪುರ: 13 ಭಾರತೀಯರಿಗೆ ಝಿಕಾ ಬಾಧೆ

ಹೊಸದಿಲ್ಲಿ,ಸೆ.1: ಝಿಕಾ ವೈರಸ್ ಬಾಧೆಯಿಂದ ಸಿಂಗಾಪುರ ತತ್ತರಿಸುತ್ತಿರುವಂತೆಯೇ,ಅಲ್ಲಿರುವ 13 ಮಂದಿ ಭಾರತೀಯರಿಗೂ, ಸೊಳ್ಳೆಯಿಂದ ಹರಡುವ ಈ ಅಪಾಯಕಾರಿ ಸೋಂಕು ತಗಲಿರುವುದು ದೃಢಪಟ್ಟಿದೆ.
ಸಿಂಗಾಪುರದಲ್ಲಿರುವ 13 ಮಂದಿ ಭಾರತೀಯರು ಝಿಕಾ ವೈರಸ್ ಪೀಡಿತರಾಗಿದ್ದಾರೆಂದು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ವರದಿ ಮಾಡಿದೆಯೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಗುರುವಾರ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಝಿಕಾ ವೈರಸ್ ಬಾಧಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಈ ಸೋಂಕು ಅಧಿಕವಾಗಿ ಕಂಡುಬಂದಿದೆ. ಝಿಕಾ ವೈರಸ್‌ನಿಂದ ಪೀಡಿತರಾದ ಭಾರತೀಯರ ಬಗ್ಗೆ ಸಿಂಗಾಪುರ ಸರಕಾರವು ಭಾರತೀಯ ಹೈಕಮಿಶನ್ ಕಚೇರಿಗೆ ಬುಧವಾರ ಮಾಹಿತಿ ನೀಡಿದೆಯೆಂದು ಅವರು ತಿಳಿಸಿದರು.
ಸಿಂಗಾಪುರದಲ್ಲಿ ಆರು ಬಾಂಗ್ಲಾ ಪ್ರಜೆಗಳು, 21 ಚೀನಿಯರು ಸೇರಿದಂತೆ ಒಟ್ಟು 115 ವಿದೇಶಿಯರಿಗೆ ಝಿಕಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಝಿಕಾ ವೈರಸ್ ಸೋಂಕು ಪೀಡಿತ ಗರ್ಭಿಣಿಯರು, ತಲೆಯ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳಿಗೆ ಜನ್ಮನೀಡಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಈ ರೋಗದ ನಿಯಂತ್ರಣವನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯೆಂದು ಘೋಷಿಸಿತ್ತು





