ಮೂವರು ಆರೋಪಿಗಳಿಗೆ ಜಾಮೀನು
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ
ಬೆಂಗಳೂರು, ಸೆ.1: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಸಂಬಂಧ ಜಾಮೀನು ಕೋರಿ ಸತೀಶ್, ಮುರಳಿಧರ್, ಸಂತೋಷ್ ಅಗಸಿಮನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸೇಗೌಡ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಆರೋಪಿಗಳು ಸಂಘಟಿತ ಅಪರಾಧ ವನ್ನು ಮಾಡಿಲ್ಲ. ಹಾಗೂ ಇವರ ಮೇಲೆ ಈ ಮೊದಲು ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ. ಆದರೂ ಆರೋಪಿಗಳನ್ನು ಕೋಕಾ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸರಕಾರಿ ವಕೀಲರು ವಾದಿಸಿ, ಈ ಮೂವರು ಆರೋಪಿಗಳೂ ಸಂಘಟಿತ ಅಪರಾಧವನ್ನು ಎಸಗಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಸತೀಶ್, ಮುರಳಿಧರ್, ಸಂತೋಷ್ ಅಗಸಿಮನಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತು.
ಪ್ರಕರಣದ ಹಿನ್ನೆಲೆ: ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಸಂದರ್ಭದಲ್ಲಿ ರಾಸಾಯನಿಕ ವಿಜ್ಞಾನ ಪ್ರಶ್ನೆ ಪತ್ರಿಕೆಯು ಮಾಲೂರು, ಬಳ್ಳಾರಿ ಹಲವೆಡೆ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಸರಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ರಾಮಕೃಷ್ಣ, ಸಹ ಮುಖ್ಯ ಅಧೀಕ್ಷಕಿ ಉಮಾದೇವಿ ಮತ್ತು ಬಳ್ಳಾರಿಯ ಗಾಂಧಿನಗರ ಎಸ್‌ಎಎಸ್‌ಎಂ ಮಹಿಳಾ ಪದವಿ ಪೂರ್ವ ಕಾಲೇಜಿನ ಅಧೀಕ್ಷಕ ಗೋವಿಂದರಾಜು, ಸಹ ಅಧೀಕ್ಷಕ ವಾಸುದೇವ್ ಮೂರ್ತಿ, ಕಚೇರಿ ಅಧೀಕ್ಷಕ ಪ್ರಸಾದ್ ಚೌಧರಿ ಅವರನ್ನು ಅಮಾನತು ಮಾಡಿ, ಸತೀಶ್, ಮುರಳಿಧರ್, ಸಂತೋಷ್ ಅಗಸಿಮನಿ ಅವರನ್ನು ಪೊಲೀಸರು ಬಂಧಿಸಿದ್ದರು. 2012ರಲ್ಲೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಕೇಂದ್ರಗಳಲ್ಲಿ ಪಿಯು ಗಣಿತ, ಭೌತ ವಿಜ್ಞಾನ ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿತ್ತು. ಆಗ ತನಿಖೆ ನಡೆಸಿ 14 ಉಪನ್ಯಾಸಕರನ್ನು ಅಮಾನತು ಮಾಡಲಾಗಿತ್ತು.





