ಹಿಂಸಾಕೃತ್ಯಗಳಲ್ಲಿ ತೊಡಗಿರುವ ಬಜರಂಗದಳ-ಎಬಿವಿಪಿ ನಿಷೇಧಕೆ್ಕ ಆಗ್ರಹ
ಬೆಂಗಳೂರು, ಸೆ.1: ಬಜರಂಗದಳ, ಎಬಿವಿಪಿ ಮತ್ತು ಗೋರಕ್ಷಕ ದಳ ಹೆಸರಿನಲ್ಲಿ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಇಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ್ ಆಗ್ರಹಿಸಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಜರಂಗದಳ, ಎಬಿವಿಪಿ ಮತ್ತು ಗೋರಕ್ಷಕ ದಳದ ಹೆಸರಿನಲ್ಲಿ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ಅಲ್ಲದೆ, ಈಗಾಗಲೇ ನಿಷೇಧಿತ ಉಗ್ರ ಸಂಘಟನೆಗಳಾದ ಅಲ್‌ಖೈದಾ, ಮುಜಾಹಿದ್ದೀನ್ ಸಂಘಟನೆಗಳ ಮಾದರಿಯಲ್ಲೇ, ಈ ಸಂಘಟನೆಗಳು ಕೂಡ ಹಿಂಸಾ ಕೃತ್ಯದಲ್ಲಿ ತೊಡಗಿವೆ. ಆದ್ದರಿಂದ ಕೇಂದ್ರ ಸರಕಾರ ಫೋಟಾ ಮತ್ತು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಪಟ್ಟು ಹಿಡಿದರು.
ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲಿತ ಸಂಘಟನೆಗಳು ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ತರುತ್ತಿವೆ. ಕರ್ನಾಟಕ ದಲ್ಲೂ ಈ ಸಂಘಟನೆಗಳ ಹಾವಳಿ ಹೆಚ್ಚಾಗಿದೆ. ಗೋ ರಕ್ಷಣೆ ಹೆಸರಿ ನಲ್ಲಿ ಮಂಗಳೂರು, ಶಿವಮೊಗ್ಗ, ಚಿಕ್ಕ ಮಗಳೂರಿನಲ್ಲಿ ಹಿಂಸೆ ನಡೆಸುತ್ತಿವೆ. ಇವರ ಚಟುವಟಿಕೆ ಭಯೋತ್ಪಾದನಾ ಸಂಘಟನೆ ಗಳಿಗಿಂತ ಕಡಿಮೆ ಇಲ್ಲ ಎಂದ ಅವರು, ಪೆಟ್ರೋಲ್ ಬಾಂಬ್ ತಯಾರಿಸುವುದು, ಹತ್ಯೆ ನಡೆಸುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ದೂರಿದರು.
ಇತ್ತೀಚೆಗೆ ನಡೆದ ಎಬಿವಿಪಿ ಪ್ರತಿಭಟನೆಯಲ್ಲಿ ನಕಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರ, ಕೈಯಲ್ಲಿ ಪೆಟ್ರೋಲ್ ಬಾಂಬ್ ಇತ್ತು ಎಂಬುದನ್ನು ಪೊಲೀಸರೇ ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿಗೆ ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿರುವ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮೋದಿ ಕ್ರಮ ಕೈಗೊಂಡಿಲ್ಲವೇಕೆ?: ಗೋರಕ್ಷಕರು ದಲಿತರ ಮೇಲೆ ಹಲ್ಲೆ ನಡೆಸಬೇಡಿ, ನನಗೆ ಗುಂಡಿಕ್ಕಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಗೋರಕ್ಷಕರಿಗೆ ಶರಣಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋದಿ ಅವರಿಗೆ ದಲಿತರ ಮೇಲೆ ಕಾಳಜಿಯಿದ್ದಿದ್ದರೆ, ಗೋರಕ್ಷಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿದ್ದರು ಎಂದು ಧನಂಜಯ್ ಆರೋಪಿಸಿದರು.





