ಪ್ಯಾರಾಲಿಂಪಿಕ್ ಪದಕ ವಿಜೇತನಿಗೆ ಎರಡು ವಿಮಾನ ನಿಲ್ದಾಣಗಳಲ್ಲಿ ಅವಮಾನ
ಚಾಂಪಿಯನ್‌ಗಳನ್ನು ಸ್ವಾಗತಿಸುವುದು ಹೀಗಾ...

ಹೈದರಾಬಾದ್, ಸೆ.2: ನಮ್ಮ ಅಥ್ಲೀಟ್‌ಗಳನ್ನು ದೇಶ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಇದು ಹೊಸ ನಿದರ್ಶನ. 2013ರ ಪ್ಯಾರಾಲಿಂಪಿಕ್‌ನಲ್ಲಿ ಎರಡು ಬೆಳ್ಳಿ ಪದಕ ಜಯಿಸಿದ್ದ ಆದಿತ್ಯ ಮೆಹ್ತಾ ಎಂಬ ಅಥ್ಲೀಟ್‌ಗೆ ಎರಡು ವಿಮಾನ ನಿಲ್ದಾಣಗಳಲ್ಲಿ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಆಗಮಿಸಲು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಹ್ತಾ ಆಗಮಿಸಿದಾಗ, ಭದ್ರತಾ ಸಿಬ್ಬಂದಿ ಅವರ ಕೃತಕ ಕಾಲು ತೆಗೆದು ಬಟ್ಟೆ ಬಿಚ್ಚುವಂತೆ ಸೂಚಿಸಿದರು!
ಈ ಪಾರಾ ಸೈಕ್ಲಿಸ್ಟ್ ಮೆಹ್ತಾ ಅವರ ಮೊಣಕಾಲಿನಿಂದ ಮೇಲೆ ಕಾಲು ಕತ್ತರಿಸಲಾಗಿದ್ದು, ನಾಲ್ಕು ದಿನ ಮುನ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅವರ ಕೃತಕ ಕಾಲನ್ನು ತೆಗೆಸಿ, ಸ್ಕ್ಯಾನ್ ಮಾಡಿದ ಬಳಿಕವಷ್ಟೇ ವಿಮಾನ ಏರಲು ಅವಕಾಶ ನೀಡಲಾಗಿತ್ತು. ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಆದಿತ್ಯ ಮೆಹ್ತಾ ಫೌಂಡೇಷನ್ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿತ್ತು.
ತಮ್ಮ ಈ ಅನುಭವಗಳನ್ನು ಮೆಹ್ತಾ ಸಾಮಾಜಿಕ ಜಾಲತಾಣಗಳ ಪೋಸ್ಟಿಂಗ್ ಮೂಲಕ ಬಹಿರಂಗಪಡಿಸಿದ್ದಾರೆ. ಇದು ತೀರಾ ಹೀನಾಯಮಾನ. ಮತ್ತೊಂದು ಕೆಟ್ಟದಿನ..ನಾಲ್ಕು ದಿನಗಳ ನಿರಂತರ ಪ್ರಚಾರದ ಹೊರತಾಗಿಯೂ, ನನ್ನ ಕೃತಕ ಕಾಲನ್ನು ಮತ್ತೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ತೆಗೆಯುವಂತೆ ಸೂಚಿಸಲಾಯಿತು" ಎಂದು ಹೇಳಿಕೊಂಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ದರ್ಪದಿಂದ ವರ್ತಿಸಿದ್ದು, ನಯವಾಗಿ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ. ಕಾಲು ತೆಗೆಯುವವರೆಗೂ ಬಿಡಲಿಲ್ಲ ಎಂದು ವಿವರಿಸಿದ್ದಾರೆ.







