"ಲಾತ್ ಮಾರ್ ದೂಂಗ ಐಸಿ ನೌಕರೀಕು..."
ಹರ್ಯಾಣ ಸಿಎಂ ಖಟ್ಟರ್ ವಿರುದ್ಧ ಗುಡುಗಿದ ಟಾಪ್ ಕಾಪ್

ಚಂಡೀಗಢ, ಸೆ.2: "ಉತ್ತರ ಪ್ರದೇಶದ ಮಾಜಿ ಡಿಜಿಪಿಯೊಬ್ಬರು ಮರು ಉದ್ಯೋಗ ಬಯಸಿ, ಹರ್ಯಾಣದಲ್ಲಿ ಪೊಲೀಸ್ ಸುಧಾರಣೆ ಸಂಬಂಧ ಸಲಹೆಯನ್ನೊಳಗೊಂಡ ವರದಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ" ಎಂದು ಹರ್ಯಾಣ ವಿಧಾನಸಭೆಯಲ್ಲಿ ಲಘುವಾಗಿ ಮಾತನಾಡಿದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ವಿರುದ್ಧ ಮಾಜಿ ಟಾಪ್ ಕಾಪ್ ಪ್ರಕಾಶ್ ಸಿಂಗ್ ಅವರು ಗುಡುಗಿದ್ದಾರೆ.
"ನನಗೆ ಅವರ ನೌಕರಿ ಅಗತ್ಯವಿದೆ ಎಂದು ಅವರು ಭಾವಿಸಿದ್ದರೆ, ಆ ನೌಕರಿಗೆ ಬೆಂಕಿ ಹಚ್ಚಲಿ" ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಯಾರಾದರೂ ಅಂಥ ನೌಕರಿ ಬಗ್ಗೆ ಮಾತನಾಡಿದರೆ, ತೆಪ್ಪಗೆ ಬಾಯಿ ಮುಚ್ಚಿಕೊಳ್ಳಿ. ನನ್ನ ಜತೆ ಮಾತನಾಡಬೇಡಿ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಉದ್ಯೋಗದ ಬಗ್ಗೆ ಲಘುವಾಗಿ ಮಾತನಾಡುವುದು ನನಗೆ ಮಾಡುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸಿಂಗ್ ಅವರು, ಜಾಟ್ ಹೋರಾಟದ ವೇಳೆ ಕಳೆದ ಫೆಬ್ರವರಿಯಲ್ಲಿ 30 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡ ವೇಳೆ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯ ಬಗ್ಗೆ ವಿವರವಾದ ವರದಿ ಸಲ್ಲಿಸಿದ್ದರು. ಘಟನೆ ನಡೆದ ತಕ್ಷಣ ಸರಕಾರ ಅವರನ್ನು ನೇಮಕ ಮಾಡಿಕೊಂಡು, ಹಾಲಿ ಇರುವ ಆಡಳಿತ ವ್ಯವಸ್ಥೆ ಸಂರಚನೆ, ವಿಧಿವಿಧಾನಗಳು ಹಾಗೂ ಕಾನೂನು ವ್ಯವಸ್ಥೆಯ ನಿರ್ವಹಣೆ ಬಗ್ಗೆ ವಿಸ್ತತ ವರದಿ ಸಲ್ಲಿಸಲು ಹಾಗೂ ಸುಧಾರಣೆಗೆ ಕ್ರಮಗಳನ್ನು ಶಿಫಾರಸ್ಸು ಮಾಡಲು ಸೂಚಿಸಿತ್ತು.
ಈ ಬಗ್ಗೆ ಬುಧವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಖಟ್ಟರ್, "ಪ್ರಕಾಶ್ ಸಿಂಗ್ ಅವರು, ಸ್ವಯಂಪ್ರೇರಿತರಾಗಿ ಈ ವರದಿ ನೀಡಲು ಮುಂದಾಗಿದ್ದರು. ಅವರಿಗೆ ಸೇವಾವಧಿ ವಿಸ್ತರಣೆಯ ಅವಶ್ಯಕತೆ ಇದೆ. ಆದರೆ ನಮಗೆ ಆ ವರದಿ ಬೇಕಾಗಿಲ್ಲ. ಆದ್ದರಿಂದ ಅವರನ್ನು ಮರುನೇಮಕ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿಕೆ ನೀಡಿದ್ದರು.







