ವಿದ್ಯಾರ್ಥಿನಿಯರ ಸುರಕ್ಷತೆ-ಗೌರವ ಕಾಪಾಡಲು ಅಗತ್ಯ ಕ್ರಮ: ಸಚಿವ ಬಸವರಾಜ ರಾಯರೆಡ್ಡಿ

ಮಂಗಳೂರು, ಸೆ.2: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸಾಯನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಗೌರವ ಕಾಪಾಡಲು ಸರಕಾರ ಆದ್ಯತೆ ನೆಲೆಯಲ್ಲಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಆಶ್ವಾಸನೆ ನೀಡಿದ್ದಾರೆ.
ನಗರದ ರಾಮಕೃಷ್ಣ ಮಠದಲ್ಲಿ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದ್ದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಾತ್‌ರೂಂನಲ್ಲಿ ಮೊಬೈಲ್‌ನ ರಹಸ್ಯ ಕ್ಯಾಮರಾ ಮೂಲಕ ಚಿತ್ರೀಕರಣ ಮಾಡಿರುವುದು ಖಂಡನೀಯ. ಯಾರು ಇಟ್ಟಿದ್ದಾರೆ ಎಂಬ ಮುಖ ಚಹರೆ ಇದೆ. ಆದರೆ ಅದು ಸ್ಪಷ್ಟವಾಗಿಲ್ಲ. ಈ ಬಗ್ಗೆ ವಿಶ್ವವಿದ್ಯಾನಿಲಯದಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದವರು ಹೇಳಿದರು.
ಇದೊಂದು ಅಪರಾಧ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ಮಾಡಲು ಸಾರ್ವಜನಿಕ ವಲಯದ ವಿಶ್ವವಿದ್ಯಾನಿಲಯದಲ್ಲಿ ತಜ್ಞರ ಕೊರತೆಯ ಹೊರತಾಗಿಯೂ ಪೊಲೀಸರಿಗೆ ದೂರು ನೀಡುವಲ್ಲಿ ವಿಳಂಬ ಮಾಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಳಂಬ ಆಗಿದೆ. ಇಂತಹ ಘಟನೆಗಳ ವಿರುದ್ಧ ತ್ವರಿತಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಆದರೆ, ಇದು ತುಂಬಾ ಸೂಕ್ಷ್ಮ ವಿಚಾರ. ಎಲ್ಲವನ್ನೂ ಬಹಿರಂಗಪಡಿಸಿ ಮಾಡಲಾಗುವುದಿಲ್ಲ. ಅದಕ್ಕಾಗಿ ಯಾರು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡಲು ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಆರೋಪಿಯ ಮುಖಚಹರೆಯನ್ನು ಪತ್ತೆಹಚ್ಚಲು ಸಾಧ್ಯ ಇದೆ ಎಂಬುದನ್ನು ಕುಲಪತಿಗಳು ನಿನ್ನೆ ನನಗೆ ತಿಳಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಘಟನೆಗಳು ಸಮಾಜ ಘಾತುಕ ಮತ್ತು ಕ್ರಿಮಿನಲ್ ಮೈಂಡ್ ಇರುವವರು ಮಾಡುತ್ತಿರುತ್ತಾರೆ. ಇಂತಹ ಘಟನೆಗಳು ಆಗಬಾರದು. ನೈತಿಕತೆ ಈ ನಿಟ್ಟಿನಲ್ಲಿ ಅಗತ್ಯ. ಪೊಲೀಸರು ಈ ಬಗ್ಗೆ ತ್ವರಿತವಾಗಿ ಪತ್ತೆ ಹಚ್ಚಿ ಯಾರು ಈ ದುಷ್ಕೃತ್ಯ ಮಾಡಿದ್ದಾರೆ. ಅವರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವ ವಿಶ್ವಾಸ ನನಗಿದೆ ಎಂದು ಹೇಳಿದರು.
ವಿದ್ಯಾಸಂಸ್ಥೆಗಳನ್ನು ಬಳಸದಿರುವ ನೈತಿಕ ಜವಾಬ್ಧಾರಿ ರಾಜಕಾರಣಿಗಳಿಗಿರಬೇಕು
ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮಕ್ಕೆ ನೀಡಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಯರೆಡ್ಡಿ, ರಾಜಕಾರಣಿಗಳಾದವರು ಕೂಡಾ ವಿದ್ಯಾಸಂಸ್ಥೆಗಳನ್ನು ಬಳಸದಿರುವ ನೈತಿಕ ಜವಾಬ್ಧಾರಿ ಹೊಂದಿರಬೇಕು. ರಾಜಕೀಯ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಿದ್ದರೆ ಅದು ತಪ್ಪು ಎಂದು ಹೇಳಿದರು.
ಬಿಜೆಪಿ ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಪಕ್ಷದ ಕಾರ್ಯಕ್ರಮ ಎಂದು ಎಲ್ಲೂ ಹೇಳಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಭಾಂಗಣ ಕೋರಲಾಗಿದ್ದು, ಉದ್ಘಾಟನೆಗೆ ಗುಜರಾತ್‌ನ ಶಾಸಕರು ಬರಲಿದ್ದಾರೆ ಎಂದು ಸಭಾಂಗಣ ಕೋರಿ ಕುಲಪತಿಗೆ ಬರೆಯಲಾದ ಪತ್ರದಲ್ಲಿ ತಿಳಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಿಂದೆಯೂ ನೀಡಲಾಗಿತ್ತು. ಅದಕ್ಕಾಗಿ ನೀಡಲಾಗಿದೆ. ಷರತ್ತು ಹಾಕಿ ನೀಡಲಾಗಿದೆ ಎಂದು ಕುಲಪತಿ ನನಗೆ ತಿಳಿಸಿದ್ದರು. ಕಾರ್ಯಕ್ರಮದ ವೀಡಿಯೊ ರೆಕಾರ್ಡಿಂಗ್ ಮಾಡಲಾಗಿದೆ. ರಾಜಕೀಯ ಭಾಷಣ ಮಾಡಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿತ್ತು. ಅದಾಗ್ಯೂ ಮುಂದೆ ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಪಕ್ಷಕ್ಕೆ ಅವಕಾಶ ನೀಡದಂತೆ ವಿಶ್ವವಿದ್ಯಾನಿಲಯದ ಕುಲಪತಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ವಿವಿಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಎಚ್ಚರಿಕೆ
ವಿದ್ಯಾರ್ಥಿನಿಯರು, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಪ್ರಕರಣಗಳು ಎಲ್ಲಿಯೂ ನಡೆಯಬಾರದು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕರಣಕ್ಕೆ ಸಂಬಂಧಿಸಿ ಮುಂದೆ ಇಂತಹ ಪ್ರಕರಣ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಸೂಕ್ತ ಮುಂಜಾಗೃತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ನಿರ್ದೇಶಿಸಲಾಗಿದೆ ಎಂದು ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ವಿಷಯಕ್ಕೆ ಸಂಬಂಧಿಸಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.







